ಉಡುಪಿ : ಅಕ್ಟೋಬರ್ 17ದ್ರಶ್ಯ ನ್ಯೂಸ್ : ಅ. 26ರಿಂದ 28ರ ವರೆಗೆ ಮಂಡ್ಯದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ ಮತ್ತು ಶ್ರೀ ಕ್ಷೇತ್ರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು 14ನೇ ರಾಜ್ಯ ಸಮ್ಮೇಳನ ನಡೆಯಲಿದೆ ಎಂದು ರಾಜ್ಯ ಸಮಿತಿ ಸದಸ್ಯ ಪಿ.ಜಯರಾಮ್ ರಾವ್ ಬಾರ್ಕೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಮ್ಮೇಳನದ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಗೌರವಾಧ್ಯಕ್ಷತೆ, ಪರಿಷತ್‌ನ ರಾಜ್ಯಾಧ್ಯಕ್ಷ ಜಿ. ಮಹದೇವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ಅವರು 3 ಸಾವಿರ ಪಾರಂಪರಿಕ ವೈದ್ಯರ ಮಾಹಿತಿ ಕೋಶವನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.
ಸಾಂಕ್ರಾಮಿಕ ರೋಗಗಳು ಮತ್ತು ಜ್ವರ, ಸ್ತ್ರೀ ರೋಗ, ಸಂಧಿವಾತ, ಚರ್ಮರೋಗ, ಪಶುವೈದ್ಯ, ಮಧು ಮೇಹ ರೋಗ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. ಹಿರಿಯ ಅನುಭವಿ 5 ಮಂದಿ ಪಾರಂಪರಿಕ ವೈದ್ಯರಿಗೆ “ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ’ ನೀಡಲಾಗುವುದು. ಪ್ರಶಸ್ತಿಯು ಪಂಚ ಲೋಹದ ಧನ್ವಂತರಿ ವಿಗ್ರಹ, 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಹೊರ ರಾಜ್ಯಗಳ 500 ವೈದ್ಯರು, ವಿವಿಧ ಜಿಲ್ಲೆಗಳ 2,500 ಮಂದಿ ಸೇರಿದಂತೆ ಒಟ್ಟು 3 ಸಾವಿರ ಮಂದಿ ವೈದ್ಯರು ಭಾಗವಹಿಸಲಿದ್ದಾರೆ ಎಂದರು.
2 ವರ್ಷಕ್ಕೊಮ್ಮೆ ಈ ಸಮ್ಮೇಳನ ನಡೆಯುತ್ತಿದೆ. ಪಾರಂಪರಿಕ ವೈದ್ಯರನ್ನು ಬೇಡಿಕೆಗಳ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು. ಉಡುಪಿ ತಾಲೂಕು ಅಧ್ಯಕ್ಷ, ವೈದ್ಯರಾದ ಹರೀಶ್ ಸಾಮಗ, ಶ್ರೀನಿವಾಸ್ ಪ್ರಸಾದ್ ಮಯ್ಯ, ಮುರಳೀಧರ ರಾವ್, ಗಣೇಶ್ ಭಟ್ ಪತ್ರಿಕಾಗೋಷ್ಠಿಯಲ್ಲಿದ್ದರು