ಉಡುಪಿ, ಅಕ್ಟೋಬರ್ 16 ದೃಶ್ಯ ನ್ಯೂಸ್ : ಉಡುಪಿ ನಗರಸಭಾ ವ್ಯಾಪ್ತಿಯ ಶ್ರೀಕೃಷ್ಣಮಠದ ರಾಜಾಂಗಣದ ಪಾರ್ಕಿಂಗ್ ಪ್ರದೇಶದ ಬಳಿ ಇರುವ ಬ್ಲಾಕ್ ಸ್ಪಾಟ್ ಅನ್ನು ತೆರವುಗೊಳಿಸಲಾಗಿದ್ದು, ಶ್ರೀಕೃಷ್ಣಮಠಕ್ಕೆ ಬರುವ ಪ್ರವಾಸಿಗರು ಮತ್ತು ಭಕ್ತಾಧಿಗಳು ಘನತ್ಯಾಜ್ಯ ವಸ್ತುಗಳನ್ನು ಮತ್ತು ಅಡಿಗೆ ಮಾಡಿದ ವಸ್ತುಗಳನ್ನು ಅಲ್ಲಲ್ಲಿ ಎಸೆದು ಹೋಗುತ್ತಿರುವುದರಿಂದ ಸದರಿ ಕಸವನ್ನು ಅಲ್ಲೇ ಇರುವಂತಹ ಕಂಪೌoಡಿನ ಬಳಿಯಲ್ಲಿ ಮಿಶ್ರಣ ಮಾಡಿ ಸಂಗ್ರಹಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಕಸ ಸಂಗ್ರಹವಾಗುತ್ತಿದ್ದು, ವಾರಕೊಮ್ಮೆ ಅಥವಾ ವಾರಕ್ಕೆ 2 ಬಾರಿ ಸ್ವಚ್ಛತೆ ಮಾಡಲಾಗುತ್ತಿದೆ.
ಪ್ರವಾಸಿಗರು ಬರುವಂತಹ ಉಡುಪಿ ನಗರ ಸ್ವಚ್ಛವಾಗಿ ಕಾಣಬೇಕೆಂಬ ಹಿತದೃಷ್ಟಿಯಿಂದ ನಗರಸಭಾ ವತಿಯಿಂದ ಹಸಿಕಸ, ಒಣಕಸ ವಿಂಗಡಣೆ ಮಾಡಿ, ಪ್ರತ್ಯೇಕವಾಗಿ ಸಂಗ್ರಹಿಸಲು ಹಸಿರು ಮತ್ತು ನೀಲಿ ಬಣ್ಣದ ಡಸ್ಟ್ಬಿನ್‌ಗಳನ್ನು ಇಟ್ಟು, ಅಲ್ಲಿ ಇರುವಂತಹ ಸ್ವಚ್ಛತಾ ಸಿಬ್ಬಂದಿಗಳಿಗೆ ಸ್ಥಳೀಯ ಸದಸ್ಯ ಗಿರೀಶ್ ಅಂಚನ್ ಹಾಗೂ ನಗರಸಭಾ ಪರಿಸರ ಅಭಿಯಂತರೆ ಸ್ನೇಹ ಕೆ.ಎಸ್, ಆರೋಗ್ಯ ನಿರೀಕ್ಷಕಿ ಶಶಿರೇಖಾ, ಮನೋಹರ, ಸ್ಯಾನಿಟರಿ ಸೂಪರ್‌ವೈಸರ್‌ಗಳಾದ ಸುರೇಶ್ ಶೆಟ್ಟಿ, ರಾಜು, ಸುರೇಂದ್ರ, ನಾಗಾರ್ಜುನರವರು ಪೌರಕಾರ್ಮಿಕರ ಸಹಾಯದೊಂದಿಗೆ ನೂತನ ಮಾದರಿಯ ಹಸಿಕಸ, ಒಣಕಸ ಡಸ್ಟ್ಬಿನ್‌ಗಳನ್ನು ಇರಿಸಿದ್ದು, ಪ್ರವಾಸಿಗರು ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಡಸ್ಟ್ಬಿನ್ಗಳಲ್ಲಿ ಹಾಕಲು ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಿ ಪ್ರವಾಸಿಗರಿಗೆ ಘನತ್ಯಾಜ್ಯ ವಸ್ತುಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ.
ಪ್ರತಿಯೊಬ್ಬ ನಾಗರಿಕರು ಘನತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿ ವಿಂಗಡಿಸಿ ಎಲ್ಲೆಂದರಲ್ಲಿ ಬಿಸಾಡದೆ ಡಸ್ಟ್ಬಿನ್‌ಗಳಲ್ಲಿ ಹಾಕಿ ನಗರಸಭೆಯ ವಾಹನಕ್ಕೆ ನೀಡಿ, ಸ್ವಚ್ಛಂದ ಪರಿಸರ ನಿರ್ಮಾಣಕ್ಕೆ ಸಹಕರಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಘನತ್ಯಾಜ್ಯಗಳನ್ನು ವಿಂಗಡಿಸಿ ಡಸ್ಟ್ಬಿನ್‌ಗಳಲ್ಲಿ ಹಾಕಲು ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.