ಉಡುಪಿ:ಅಕ್ಟೋಬರ್: 16: ದೃಶ್ಯ ನ್ಯೂಸ್ : ಒಲಂಪಿಕ್ ಕ್ರೀಡಾಕೂಟದಲ್ಲಿ ಈಜು ಸ್ಪರ್ಧೆಗೆ ವಿಶೇಷ ಮಹತ್ವವಿದ್ದು, ಹಲವಾರು ವಿಭಾಗದಲ್ಲಿ ಇದರ ಸ್ಪರ್ಧೆ ನಡೆಯುತ್ತದೆ. 8 ವರ್ಷಗಳ ಅವಧಿಯಲ್ಲಿ ಓರ್ವ ಕ್ರೀಡಾಳು ಹಲವಾರು ಪ್ರಶಸ್ತಿಗಳನ್ನು ಗಳಿಸುವ ಅವಕಾಶವಿದೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಸಹ ಉಪಕುಲಪತಿ ಡಾಕ್ಟರ್ ಶರತ್ ರಾವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಣಿಪಾಲ ವಿಶ್ವವಿದ್ಯಾನಿಲಯದ ಎಂಐಟಿ ಈಜುಕೊಳದಲ್ಲಿ ಡಾಕ್ಟರ್ ಟಿ.ಎಂ.ಎ ಫೈ ಅವರ 125 ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಮುಕ್ತ ಈಜು ಪಂದ್ಯಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಈಜು ಪಂದ್ಯಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಉಡುಪಿ ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ್ ಅವರು, ಉಡುಪಿಯಲ್ಲಿ ಶಾಸಕರ ನೇತೃತ್ವದಲ್ಲಿ ಕ್ರೀಡಾಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಮತ್ತಷ್ಟು ಸಕ್ರಿಯವಾಗುವ ಆಶಾದಾಯಕ ಬೆಳವಣಿಗೆಯನ್ನು ನಿರೀಕ್ಷಿಸಬಹುದು ಎಂದರು.
ಎಂಐಟಿ ನಿರ್ದೇಶಕರಾದ ಕಮಾಂಡರ್ ಡಾಕ್ಟರ್ ಅನಿಲ್ ರಾಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡಾಕ್ಟರ್ ನಾಗರಾಜ್ ಕಾಮತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸೆಲ್ವಕುಮಾರ್ ಸ್ವಾಗತಿಸಿದರು. ಎಂಐಟಿಯ ಕ್ರೀಡಾ ನಿರ್ದೇಶಕರಾದ ಡಾ.ಉಪೇಂದ್ರ ನಾಯಕ್ ವಂದಿಸಿದರು. ಡಾ.ಬಾಲಕೃಷ್ಣ ಮದ್ದೋಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಎಂಐಟಿಯ ಕ್ರೀಡಾ ಸಹ ನಿರ್ದೇಶಕ ಡಾ.ಸ್ಯಾಮ್ ಉಪಸ್ಥಿತರಿದ್ದರು. ಜಿಲ್ಲೆಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಸ್ಪರ್ಧಿಗಳು ಈ ಪಂದ್ಯಕೂಟದಲ್ಲಿ ಭಾಗವಹಿಸಿದರು.