ಸಂಸ್ಥೆಯ ಏಳಿಗೆಗೆ ತಮ್ಮನ್ನು ಮುಡಿಪಾಗಿಟ್ಟು ಅಗಲಿದ ಚೇತನಗಳನ್ನು ಸ್ಮರಿಸುವುದು ಸಂಸ್ಥೆಯ ಜವಾಬ್ದಾರಿ : ಡಾ.ಎಚ್.ಎಸ್.ಬಲ್ಲಾಳ್
ಉಡುಪಿ :ಅಕ್ಟೋಬರ್: 14: ದೃಶ್ಯ ನ್ಯೂಸ್ : ಸಂಸ್ಥೆಯ ಏಳಿಗೆಗೆ ತಮ್ಮನ್ನು ಮುಡಿಪಾಗಿಟ್ಟು ಅಗಲಿದ ಹಿರಿಯ ಚೇತನಗಳನ್ನು ಸ್ಮರಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ರಂಗಭೂಮಿ ಉಡುಪಿ ಅಗಲಿದ ಪದಾಧಿಕಾರಿಗಳ ಸ್ಮರಣೆ ಹಾಗೂ ಅವರ ನೆನಪಿನ ಗೌರವಾರ್ಪಣೆಯನ್ನು ಸಾಧಕ ಕಲಾವಿದರಿಗೆ ಪ್ರದಾನ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಮಾಹೆ ಮಣಿಪಾಲದ ಸಹಕುಲಾಧಿಪತಿ ಹಾಗೂ ರಂಗಭೂಮಿ ಉಡುಪಿ ಸಂಸ್ಥೆಯ ಗೌರವಾಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಹೇಳಿದರು.
ಅವರು ಶುಕ್ರವಾರ ಎಂಜಿಎo ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಾಡಿನ ಪ್ರತಿಷ್ಠಿತ ರಂಗಭೂಮಿ ಸಂಸ್ಥೆ ರಂಗಭೂಮಿ ಉಡುಪಿ ವತಿಯಿಂದ ರಂಗಭೂಮಿಯನ್ನು ಕಟ್ಟಿ ಬೆಳೆಸಿ ಇತ್ತೀಚಿಗೆ ಅಗಲಿದ ಹಿರಿಯರ ನೆನಪಲಿ ರಂಗೋತ್ಸವ ರಂಗ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಹೆಯಿಂದ ರಂಗಭೂಮಿ ಉಡುಪಿಯ ಚಟುವಟಿಕೆಗಳಿಗೆ ಆಶ್ರಯ ಸಮೇತ ಪ್ರೋತ್ಸಾಹವನ್ನು ನಿರಂತರ ನೀಡಲಿದೆ. ರಂಗಭೂಮಿ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೂ ಕಾರಣವಾಗುವುದರಿಂದ ಈ ರಂಗದತ್ತ ಯುವ ಜನತೆಯನ್ನು ಹೆಚ್ಚಾಗಿ ಸೆಳೆಯುವ ಅಗತ್ಯವಿದೆ. ಅವರಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಬೆಳೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟರು.
೬ ಮಂದಿಯ ಸ್ಮರಣೆಯಲ್ಲಿ ಆರು ಮಂದಿ ಸಾಧಕರಿಗೆ ಸಂಮಾನ : ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ರಂಗಭೂಮಿ ಉಡುಪಿಯ ಚಟುವಟಿಕೆಗಳಿಗೆ ತಮ್ಮನ್ನು ಸಮರ್ಪಿಸಿಕೊಂಡು ಏಳಿಗೆಗೆ ಅಹರ್ನಿಶಿಯಾಗಿ ಸೇವೆ ಸಲ್ಲಿಸಿ ಅಗಲಿದ ಪಿ.ವಾಸುದೇವ ರಾವ್, ಯು.ಉಪೇಂದ್ರ, ಶ್ರೀನಿವಾಸ ಶೆಟ್ಟಿಗಾರ್, ಎಂ. ನಂದ ಕುಮಾರ್, ಯು.ದುಗ್ಗಪ್ಪ ಹಾಗೂ ಮೇಟಿ ಮುದಿಯಪ್ಪ ಅವರ ಸ್ಮರಣೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಈ ರಂಗ ನಮನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಗುವುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಉಡುಪಿ ಜಿಲ್ಲೆ ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ರಾಜ್ಯದಲ್ಲಿಯೇ ನಂ.೧ ಸ್ಥಾನದಲ್ಲಿರಲು ಈ ಜಿಲ್ಲೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವುದೇ ಕಾರಣವಾಗಿದೆ. ರಂಗಭೂಮಿ ಜೀವನದಲ್ಲಿ ಉತ್ಸಾಹ, ಕ್ರಿಯಾಶೀಲತೆಯನ್ನು ತುಂಬುತ್ತದೆ ಎಂದರು.
ಎoಜಿಎಓ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಶ್ಮೀ ನಾರಾಯಣ ಕಾರಂತ ಅವರು ಎಂಜಿಎo ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ರಂಗಭೂಮಿ ಉಡುಪಿಯ ಕೊಡುಗೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅವರಿಗೆ ಪಿ.ವಾಸುದೇವ ರಾವ್ ಸಂಸ್ಮರಣ ರಂಗಭೂಮಿ ಸಂಮಾನ ಹಾಗೂ ಬೈಂದೂರಿನ ರಂಗಭೂಮಿ ಸಂಸ್ಥೆ ಲಾವಣ್ಯ ಬೈಂದೂರಿನ ಗಣೇಶ್ ಕಾರಂತ್ ಅವರಿಗೆ ಯು.ಉಪೇಂದ್ರ ರಂಗಭೂಮಿ ಸಂಮಾನ ಅರ್ಪಿಸಲಾಯಿತು.
ಬೆಂಗಳೂರಿನಲ್ಲಿ ನಡೆದ ಮಿಸ್ ಟೀನ್ ಕರ್ನಾಟಕ 2023 ರಲ್ಲಿ ಬೆಸ್ಟ್ ರ‍್ಯಾಂಪ್ ವಾಕ್ ಟೈಟಲ್ ಸಮೇತ ‘ಮಿಸ್ ಟೀನ್ ಕರ್ನಾಟಕ 2023’ ಪ್ರಶಸ್ತಿ ಮುಡಿಗೇರಿಸಿಕೊಂಡ ಎಂಜಿಎo ಕಾಲೇಜಿನ ಹಳೆ ವಿದ್ಯಾರ್ಥಿನಿ ಸಿಂಚನಾ ಪ್ರಕಾಶ್ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕಿ ಶ್ಯಾಮಲಾ ಉಪೇಂದ್ರ, ಡಾ.ಗಣಪತಿ ರಾವ್ ಉಪಸ್ಥಿತರಿದ್ದರು.
ಲೇಖಕಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿ, ರಂಗಭೂಮಿ ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ವಂದಿಸಿದರು. ಎಂ.ವಿವೇಕಾನoದ ಪರಿಚಯಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಹೊಂಗಿರಣ ಶಿವಮೊಗ್ಗ ವತಿಯಿಂದ ಶೃತಿ ಆದರ್ಶ ಅವರಿಂದ ಏಕವ್ಯಕ್ತಿ ರಂಗ ಪ್ರಸ್ತುತಿ `ನಿರಾಕರಣೆ ‘ ಪ್ರಸ್ತುತಿಗೊಂಡಿತು.
ಹಿರಿಯ ರಂಗಕರ್ಮಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅವರಿಗೆ ಪಿ.ವಾಸುದೇವ ರಾವ್ ಸಂಸ್ಮರಣ ರಂಗಭೂಮಿ ಸಂಮಾನ ಹಾಗೂ ಬೈಂದೂರಿನ ರಂಗಭೂಮಿ ಸಂಸ್ಥೆ ಲಾವಣ್ಯ ಬೈಂದೂರಿನ ಗಣೇಶ್ ಕಾರಂತ್ ಅವರಿಗೆ ಯು.ಉಪೇಂದ್ರ ರಂಗಭೂಮಿ ಸಂಮಾನ ಅರ್ಪಿಸಲಾಯಿತು.