ಮಂಗಳೂರು : ಅಕ್ಟೋಬರ್: 14: ದೃಶ್ಯ ನ್ಯೂಸ್ : ದಸರಾ ಮರೆವಣಿಗಳಲ್ಲಿ ದೈವದ ಕೋಲ ದೃಶ್ಯರೂಪಕ ಟ್ಯಾಬ್ಲೊಗಳನ್ನು ಬಳಸದಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಿತಿಯು ತಿಳಿಸಿದೆ. ಅನೇಕ ಸಂಘಟನೆಗಳ ವಿರೋಧದ ಹಿನ್ನಲೆಯಲ್ಲಿ ಸಮಿತಿಯು ಈ ತಿರ್ಮಾನ ಕೈಗೊಂಡಿದೆ.
ಕುದ್ರೋಳಿ ಗೋಕರ್ಣನಾಥ 34ನೇ ವರ್ಷದ ದಸರಾ ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದೆ. 9 ದಿನಗಳ ನವರಾತ್ರಿ ಉತ್ಸವ ಅಕ್ಟೋಬರ್ 15ರಿಂದ ಆರಂಭವಾಗಲಿದ್ದು, ಅಕ್ಟೋಬರ್ 24ಕ್ಕೆ ದಸರಾಕ್ಕೆ ತೆರೆಬೀಳಲಿದೆ. ಈ ದಿನದಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಬೇರೆ ಬೇರೆ ಸಂಘಟನೆಗಳ ಟ್ಯಾಬ್ಲೊಗಳ ಪ್ರದರ್ಶನಗೊಳ್ಳಲಿದೆ. ಇನ್ನು ದಕ್ಷಿಣ ಕನ್ನಡದ ಅನೇಕ ಕಡೆ ದೈವದ ಕೋಲದ ರೂಪಕಗಳು ಪ್ರದರ್ಶನಗೊಳ್ಳುತ್ತಿದೆ. ಇನ್ನು ಮುಂದೆ ಇದು ನಡೆಯಬಾರದು ಹಾಗೂ ಈ ಬಾರಿ ದಸರಾದಲ್ಲೂ ಇದಕ್ಕೆ ಅವಕಾಶ ನೀಡಬಾರದು ಎಂದು ದೂರು ಬಂದಿದೆ ಎಂದು ದೇವಸ್ಥಾನ ಸಮಿತಿ ಕೋಶಾಧಿಕಾರಿ ಆರ್. ಪದ್ಮರಾಜ್ ತಿಳಿಸಿದ್ದಾರೆ.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ದೇವತೆಗಳು ಹಾಗೂ ದೈವಗಳ ಟ್ಯಾಬ್ಲೊಗಳಿಗೆ ಅವಕಾಶ ಇಲ್ಲ ಎಂದು ನಿರ್ಧಾರಿಸಲಾಗಿದೆ. ಈ ಬಗ್ಗೆ ಎಲ್ಲ ಟ್ಯಾಬ್ಲೊ ಪ್ರದರ್ಶಕರಿಗೆ ತಿಳಿಸಲಾಗಿದೆ ಎಂದು ಆರ್. ಪದ್ಮರಾಜ್ ಹೇಳಿದ್ದಾರೆ. ಇನ್ನು ದಸರಾ ಮೆರವಣಿಗಳಲ್ಲಿ ಡಿಜೆ ಸಂಗೀತ ಮತ್ತು ನೃತ್ಯವನ್ನು ನಿಷೇಧಿಸುವ ಬಗ್ಗೆಯೂ ಸಮಿತಿಯು ಚಿಂತಿಸುತ್ತಿದೆ ಎಂದು ಅವರು ಹೇಳಿದರು. ಈ ಬಗ್ಗೆ ಎಲ್ಲ ಸಂಘಟಕರ ಸಭೆ ಕರೆದಿದ್ದೇವೆ. ಈ ಡಿಜೆ ಸಂಗೀತ ಮತ್ತು ನೃತ್ಯ ನಮ್ಮ ಸಂಸ್ಕೃತಿಗೆ ಧಕ್ಕೆ ತರುತ್ತಿದೆ. ಧಾರ್ಮಿಕ ಆಚರಣೆಗಳಲ್ಲಿ ಈ ಇಂತಹ ವ್ಯವಸ್ಥೆಗಳು ಸರಿಯಲ್ಲ, ಹಾಗಾಗಿ ಸಂಘಟಕರ ಸಭೆಯ ಕರೆದು ತಿರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.