ಉಡುಪಿ:ಅಕ್ಟೋಬರ್ : 13: ದೃಶ್ಯ ನ್ಯೂಸ್ : ಜಾಗತಿಕ (ಹಾಸ್ಪೈಸ್) ಸಹಾನುಭೂತಿ ಮತ್ತು ಉಪಶಾಮಕ ಆರೈಕಾ ದಿನಾಚರಣೆಯ ಅಂಗವಾಗಿ ಉಡುಪಿ ಲೋಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಯ ವತಿಯಿಂದ ‘ಸಹಾನುಭೂತಿಯ ಸಮುದಾಯಗಳು ಉಪಶಾಮಕ ಆರೈಕೆಗಾಗಿ ಒಂದಾಗಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಇದೇ ಬರುವ ಅಕ್ಟೋಬರ್ 14ರಂದು ಸಂಜೆ 4 ಗಂಟೆಗೆ ಆಸ್ಪತ್ರೆಯ ವಾತ್ಸಲ್ಯ ಘಟಕದ ವಠಾರದಲ್ಲಿ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತನ್ನ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಜಯಂಟ್ಸ್ ಇಂಟರ್ ನ್ಯಾಷನಲ್ ಬ್ರಹ್ಮಾವರ ಇದರ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಕ್ಯಾನ್ಸರ್ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ನಿರ್ವಹಣೆಯಲ್ಲಿ ಉಪಶಾಮಕ ಆರೈಕೆಯ ಪಾತ್ರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುವ ಉದ್ದೇಶದಿಂದ ಉಪಶಾಮಕ ಆರೈಕಾ ದಿನವನ್ನು ಆಚರಿಸಲಾಗುತ್ತದೆ ಎಂದರು.
ಮಿಷನ್ ಆಸ್ಪತ್ರೆಯು ವೃದ್ಧರಿಗಾಗಿ ವಿವಿಧ ಸಮುದಾಯ ಆಧಾರಿತ ಯೋಜನೆಗಳನ್ನು ಜಾರಿಗೊಳಿಸಿದೆ. ವೃದ್ಧರ ಅಗತ್ಯತೆಗಳನ್ನು ಪೂರೈಸುವ ಮೂಲಕ ಹಲವಾರು ಸೇವೆಗಳನ್ನು ಒದಗಿಸುತ್ತಿದೆ. ಪ್ರಸ್ತುತ ‘ಸಹಜೀವನ’ ಹಿರಿಯ ನಾಗರಿಕರ ಆರೈಕಾ ಕೇಂದ್ರ, ‘ಕರುಣಾಲಯ’ ಹಾಸಿಗೆಯಲ್ಲಿರುವ ವಯೋ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರ ಅಗತ್ಯತೆಗಳನ್ನು ಪೂರೈಸುವ ಕೇಂದ್ರ, ಹಾಗೂ ‘ವಾತ್ಸಲ್ಯ’ ಉಪಶಾಮಕ ಕೇಂದ್ರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಆರೈಕೆ ಮಾಡುತ್ತಿದೆ. ಅಲ್ಲದೆ, ರೋಗಿಗಳ ಜೀವನ ಮಟ್ಟವನ್ನು ಸುಧಾರಿಸುವ ಹಾಗೂ ಚಿಕಿತ್ಸೆ ಮೀರಿ ಕಾಳಜಿ ವಹಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ದೀನಾ ಪ್ರಭಾವತಿ, ಹಿರಿಯ ವೈದ್ಯ ಗಣೇಶ್ ಕಾಮತ್, ರೋಹಿ ರತ್ನಾಕರ್ ಮೊದಲಾದವರು ಉಪಸ್ಥಿತರಿದ್ದರು.