ಉಡುಪಿ, ಅ.13: ದೃಶ್ಯ ನ್ಯೂಸ್: ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಬಹು ದಿನದ ಬೇಡಿಕೆಯಾದ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಕರವೇ ರಾಜ್ಯಾಧ್ಯಕ್ಷರಾದ ಟಿ. ಎ ನಾರಾಯಣಗೌಡರ ಆದೇಶದಂತೆ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಯವರ ಸಾರಥ್ಯದಲ್ಲಿ, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಹಾಗೂ ಸದಸ್ಯರುಗಳನ್ನೊಳಗೂಡಿ ಶಾಂತಿಯುತವಾಗಿ ಹೋರಾಟ ಮಾಡುತ್ತಾ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ. ವಿದ್ಯಾಕುಮಾರಿಯವರಿಗೆ ಮನವಿಯನ್ನು ಕೊಡುತ್ತಾ ಬಂದಿದೆ. ಸದ್ರಿ ಮನವಿಗೆ ಸ್ಪಂದಿಸಿ ಉಡುಪಿ ಜಿಲ್ಲೆಯ ಎಲ್ಲಾ ಕಛೇರಿಗಳಲ್ಲಿ, ಬ್ಯಾಂಕುಗಳಲ್ಲಿ, ಹೋಟೆಲ್ ಗಳಲ್ಲಿ, ಹಾಗೂ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಎದ್ದು ಕಾಣುವ ಹಾಗೇ, ಕನ್ನಡ ಕಡ್ಡಾಯಗೊಳಿಸಬೇಕೆಂದು ಸುತ್ತೋಲೆ ( ಸಂಖ್ಯೆ : ಕಸಂಇ/ಸನಿಉ/172/2023-24) ಯನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ.
ರಾಜ್ಯ ಸರ್ಕಾರದ ಸುತ್ತೋಲೆ ಹಾಗೂ ಅಧಿಸೂಚನೆಯಂತೆ ಕನ್ನಡ ಭಾಷೆಯನ್ನು ರಾಜ್ಯದ ಎಲ್ಲಾ ಹಂತಗಳಲ್ಲಿ ಸಂಪೂರ್ಣವಾಗಿ ಅನುಷ್ಠಾನ ಜಾರಿಗೊಳಿಸುವಂತೆ ಸೂಚಿಸಲಾಗಿದ್ದು, ಅದರನ್ವಯ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತ್, ನಗರಸಭೆ, ಪಟ್ಟಣ ಪಂಚಾಯತ್ ಎಲ್ಲಾ ಅಧೀನ ಕಛೇರಿ, ಅಂಗಡಿ, ಮಾರಾಟ ಮಳಿಗೆ, ಹೊಟೇಲ್, ಬ್ಯಾಂಕ್, ಕಂಪೆನಿಗಳಲ್ಲಿ ಕನ್ನಡ ನಾಮಫಲಕಗಳನ್ನು ಕನ್ನಡದಲ್ಲಿ ಹೆಚ್ಚು ಎದ್ದು ಕಾಣುವ ಹಾಗೆ ಪ್ರದರ್ಶಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.