ಬೆಂಗಳೂರು : ಅಕ್ಟೋಬರ್: 13: ದೃಶ್ಯ ನ್ಯೂಸ್ : ಉಡುಪಿ ಜಿಲ್ಲೆಯ ಮೀನುಗಾರರ ವಿವಿಧ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಮೀನುಗಾರಿಕೆ ಸಚಿವ ಶ್ರೀ ಮಾಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು.
ಮಲ್ಪೆ ಮೀನುಗಾರರ ಸಂಘ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದ ನಿಯೋಗ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೀನುಗಾರರ ಪ್ರಮುಖ ಬೇಡಿಕೆಗಳಾದ ಯಾಂತ್ರಿಕ ದೋಣಿಗಳಿಗೆ ಡೀಸೆಲ್ 500 ಲೀಟರಿಗೆ ಹೆಚ್ಚಳ ಹಾಗೂ ಡೀಸೆಲ್ ಕೋಟಾವನ್ನು ಮಾಸಿಕದ ಬದಲು ವಾರ್ಷಿಕ ಕೋಟಾ, ನಾಡದೋಣಿಗಳಿಗೆ ವರ್ಷಪೂರ್ತಿ ಸಮರ್ಪಕ ರೀತಿಯಲ್ಲಿ ಸೀಮೆಎಣ್ಣೆ ಪೂರೈಕೆ, ಪ್ರತಿವರ್ಷ ಬಂದರಿನ ಡ್ರೆಜ್ಜಿಂಗ್ ನಡೆಸಲು ಕ್ರಮ, ಔಟರ್ ಹಾರ್ಬರ್ ನಿರ್ಮಾಣ, ಸೀ ಆಂಬ್ಯುಲೆನ್ಸ್ ಮಂಜೂರು, ಅಂತರ್ ರಾಜ್ಯ ಸಮನ್ವಯ ಸಮಿತಿ, ಬಂದರು ಸುಗಮ ನಿರ್ವಹಣೆಯ ದೃಷ್ಟಿಯಿಂದ ಸ್ಥಳೀಯ ಸಂಘ ಸಂಸ್ಥೆಗೆ ನೀಡುವುದು, ನಾಡದೋಣಿ ತಂಗುದಾಣ ನಿರ್ಮಾಣ, ಮಲ್ಟಿ ಪಾರ್ಕಿಂಗ್ ವ್ಯವಸ್ಥೆ, ಪರ್ಸಿನ್ ಸಂಘಕ್ಕೆ ಬಹು ಅಂತಸ್ತು ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರು, ಟೆಗ್ಮಾ ಕಂಪೆನಿಗೆ ನೀಡಿರುವ ನಿವೇಶನದ ಗುತ್ತಿಗೆ ಅವಧಿ ಮಗಿದ ನಂತರ ಮೀನುಗಾರಿಕೆ ಇಲಾಖೆಗೆ ಹಸ್ತಾಂತರ,ಮರದ ಬೋಟ್ ಮರು ನಿರ್ಮಾಣದ ಸಾಧ್ಯತಾ ಪ್ರಮಾಣ ಪತ್ರದ ಅವಧಿಯನ್ನು ಮರದ ಬೋಟಿಗೆ 5 ವರ್ಷ ಹಾಗೂ ಸ್ಟೀಲ್ ಬೋಟಿಗೆ 7 ವರ್ಷಕ್ಕೆ ಕಡಿತಗೊಳಿಸುವುದು, ನಾಡದೋಣಿ ಗಳಿಗೆ ಹೈಬ್ರಿಡ್ ಎಲೆಕ್ಟ್ರಿಕ್ ಇಂಜಿನ್ ಅಳವಡಿಕೆಯ ಬಗ್ಗೆ ಪ್ರಸ್ತಾಪಿಸಿ ಇಲಾಖೆ ಈ ಬಗ್ಗೆ ತಕ್ಷಣ ಕ್ರಮವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸಲ್ಮಾ ಫಾಹಿಮ್, ಇಲಾಖೆಯ ನಿರ್ದೇಶಕರಾದ ದಿನೇಶ್ ಕುಮಾರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಕೆ. ಸುವರ್ಣ, ಮೀನುಗಾರ ಮುಖಂಡರಾದ ಸಂತೋಷ್ ಸಾಲ್ಯಾನ್, ಜಗನ್ನಾಥ, ರವಿ ಸುವರ್ಣ, ಆನಂದ ಖಾರ್ವಿ, ಯಶವಂತ ಗಂಗೊಳ್ಳಿ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.