ಬ್ರಹ್ಮಗಿರಿ : ಅಕ್ಟೋಬರ್: 12: ದೃಶ್ಯ ನ್ಯೂಸ್ : ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಹಾಗೂ ಎಪಿಡಿ ಸಂಸ್ಥೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಇವರ ನಗರದ ಅಜ್ಜರಕಾಡು ರೆಡ್ ಕ್ರಾಸ್ ಭವನದಲ್ಲಿ ನಡೆದ ದಿವ್ಯಾಂಗರ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗ ಶಿಬಿರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ದಿವ್ಯಾಂಗರಿಗೆ ಸ್ವಾವಲಂಬಿ ಜೀವನಕ್ಕೆ ದಾರಿ ದೀಪವಾಗುವ ಮಾರ್ಗದರ್ಶನ ನೀಡಿ, ರೆಡ್ ಕ್ರಾಸ್ ಸಂಸ್ಥೆಯ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಯೋಜನಾ ಸಂಯೋಜಕ ಹರೀಶ್ ಶೆಟ್ಟಿ ಆಜ್ರಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕೌಶಲ್ಯಾಭಿವೃದ್ಧಿ ತರಬೇತಿಯ ಉದ್ದೇಶ, ಚಟುವಟಿಕೆಗಳು ಹಾಗೂ ನೇಮಕಾತಿ ಪ್ರಕ್ರಿಯೆ ಬಗ್ಗೆ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಆಕಾಶ ಶೆಟ್ಟಿ ಅಂಪಾರು ಆರ್.ಪಿ.ಡಬ್ಲ್ಯೂ.ಡಿ ಆಕ್ಟ್ 2016 ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಪಿಡಿ ಸಂಸ್ಥೆಯ ನಿರ್ದೇಶಕ ಮಹೇಶ್ ಕೆ, ನಿರಂಜನ್ ಟಿ, ಗುಲಪ್ಪ, ಸುಪ್ರೀತಾ, ಶ್ರೀಧರ್, ಜಿಲ್ಲೆಯ ದಿವ್ಯಾಂಗರು, ಉಡುಪಿ ಹಾಗೂ ಕಾರ್ಕಳ ತಾಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಎಪಿಡಿ ಸಂಸ್ಥೆಯ ನೇಮಕಾತಿ ಅಧಿಕಾರಿ ಶ್ರೀಧರ್ ಸ್ವಾಗತಿಸಿ, ಡಿ.ಡಿ.ಆರ್.ಸಿ ನೋಡಲ್ ಅಧಿಕಾರಿ ಜಯಶ್ರೀ ನಿರೂಪಿಸಿ, ಎಪಿಡಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಹರೀಶ್ ಶೆಟ್ಟಿ ವಂದಿಸಿದರು.