⭕️ಉಡುಪಿ ಜಿಲ್ಲೆಯಲ್ಲಿ ಅವ್ಯವಹಾರಗಳ ಸರಮಾಲೆ:
ಬ್ರಹ್ಮಾವರ: ಅ.10: ದೃಶ್ಯ ನ್ಯೂಸ್ : ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಕರಾವಳಿ ಕರ್ನಾಟಕದ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಗುಜರಿ ವಸ್ತುಗಳ ಮಾರಾಟದಲ್ಲಿ ನಡೆದಿದೆ ಎನ್ನಲಾದ 14 ಕೋಟಿ ರೂ.ಗಳಿಗೂ ಅಧಿಕ ಭ್ರಷ್ಟಾಚಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬ್ರಹ್ಮಾವರದಲ್ಲಿ ಪ್ರತಿಭಟನಾ ಜಾಥಾ ಹಾಗೂ ಬಹಿರಂಗ ಸಭೆ ಜರಗಿತು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಮುಂಭಾಗದp ರಾಷ್ಟ್ರೀಯ ಹೆದ್ದಾರಿ 66 ರಲ್ಲಿ
ಪ್ರಾರಂಭಗೊಂಡ ಪ್ರತಿಭಟನಾ ಜಾಥಾ, ಹೆದ್ದಾರಿಯಲ್ಲಿ ಸಾಗಿ ಬಂದು ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಸಮಾಪನಗೊಂಡು ಬಳಿಕ ಬೃಹತ್ ಜನಜಾಗೃತಿ ಸಭೆ ನಡೆಸಲಾಯಿತು.
ಪ್ರತಿಭಟನಾ ಜಾಥಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ನಾಯಕ ಪ್ರತಾಪ್‌ಚಂದ್ರ ಶೆಟ್ಟಿ ನೇತೃತ್ವದ ಜಿಲ್ಲಾ ರೈತ ಸಂಘ ಅವಿರತ ಪರಿಶ್ರಮದಿಂದ ಇಡೀ ಹಗರಣವನ್ನು ಬಯಲಿಗೆಳೆದಿದೆ. ಇದೀಗ ಅವರು ಕಾನೂನು ಹೋರಾಟಕ್ಕೂ ಚಾಲನೆ ನೀಡಿದ್ದಾರೆ. ಈ ಹಗರಣವನ್ನು ತಾರ್ಕಿಕ ಅಂತ್ಯ ಮುಟ್ಟಿಸಲು ಕಾಂಗ್ರೆಸ್ ಕಟಿಬದ್ಧವಾಗಿದೆ ಎಂದರು.
ಬಹಿರಂಗ ಪ್ರತಿಭಟನಾ ಸಭೆಯಲ್ಲಿ, ಕೆಪಿಸಿಸಿ ವಕ್ತಾರ ಸುದೀರ್ ಕುಮಾರ್ ಮುರೋಳ್ಳಿ ದಿಕ್ಸೂಚಿ ಭಾಷಣ ಮಾಡಿದರು. ಉಡುಪಿ ಜಿಲ್ಲೆಯಲ್ಲಿ ಅವ್ಯವಹಾರಗಳ ಸರಮಾಲೆ ಕಂಡುಬರುತ್ತಿದೆ, ನಾವು ಈವರೆಗೆ ಕಬ್ಬು, ಸಕ್ಕರೆ, ಬೆಲ್ಲ, ಮಾಂಸ ಮುಂತಾದವನ್ನು ತಿಂದು ಅರಗಿಸಿಕೊಂಡಿದ್ದನ್ನು ನೋಡಿದ್ದೇವೆ. ಆದರೆ ಬ್ರಹ್ಮಾವರದಲ್ಲಿ ಆಡಳಿತ ಮಂಡಳಿ ಕಬ್ಬಿಣವನ್ನೇ ತಿಂದು ಅರಗಿಸಿಕೊಂಡಿದೆ.
ಕಾರ್ಕಳದಲ್ಲಿ ಪರಶುರಾಮನ ವಿಗ್ರಹದ ಕಂಚನ್ನು ತಿಂದು ಅರಗಿಸಿಕೊಂಡಿದ್ದಾರೆ ಎಂದರು. ಕರಾವಳಿ ಜಿಲ್ಲೆಗೆ ವರದಾನ ವಾಗಬೇಕಿದ್ದ ಸಕ್ಕರೆ ಕಾರ್ಖಾನೆ, ಸದ್ಯ ಅಕ್ರಮ ಗುಜರಿ ವ್ಯಾಪಾರದ ಮೂಲಕ ರಾಜ್ಯಾದ್ಯಂತ ಸುದ್ದಿ ಆಗುತ್ತಿರುವುದು ಖೇದಕರ ಎಂದರು.
ಆಸ್ಕರ್ ಫೆರ್ನಾಂಡೀಸ್ ಅವರ ಕನಸಿನ ಕೂಸಾದ ಈ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಕೋಟ್ಯಾಂತರ ರೂ. ಭ್ರಷ್ಟಾ ಚಾರ ರಾಜ್ಯ ಮಟ್ಟದ ಸುದ್ದಿಯಾಗಬೇಕು. ಕಬ್ಬಿಣಕ್ಕೆ ತುಕ್ಕು ಹಿಡಿಯುವುದು ನಮಗೆ ಗೊತ್ತು, ಆದರೆ ಶಿಲೆಕಲ್ಲಿಗೂ ತುಕ್ಕು ಹಿಡಿಯುವು ಇಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಮಾತ್ರ ಕೇಳಿರುವುದು ಎಂದು ವ್ಯಂಗ್ಯವಾಡಿದರು.
14 ಕೋಟಿ ರೂ.ಗಳಿಗೂ ಅಧಿಕ ಭ್ರಷ್ಟಾಚಾರ ನಡೆಸಿರುವ ಕಾರ್ಖಾನೆಯ ಆಡಳಿತ ಮಂಡಳಿ ತಕ್ಷಣ ರಾಜಿನಾಮೆ ಕೊಟ್ಟು ನಿರ್ಗಮಿಸಬೇಕು. ಪೊಲೀಸ್ ಠಾಣೆಗೆ ಬರಬೇಕು. ಈ ಕಾರಣಕ್ಕಾಗಿ ಕಾಂಗ್ರೆಸ್ ಜನಪರ ಚಳವಳಿ ನಡೆಸುತ್ತಿದೆ. ಎಂದರು.
ಉಡುಪಿ ಶಾಸಕರಿಗೆ ನಗರಸಭೆಯಲ್ಲಿ ಕುಳಿತು ಅಯುಕ್ತರಿಗೆ ಧಮ್ಕಿ ಹಾಕುವ ತಾಕತ್ತಿದೆ. ಇಲ್ಲಿನ ಭ್ರಷ್ಟಾಚಾರದ ಕುರಿತು ಮಾತನಾಡುವ ತಾಕತ್ತು ಇಲ್ಲವೇ ಎಂದು ಪ್ರಶ್ನಿಸಿದರು. ಈ ಬಗ್ಗೆ ಶಾಸಕರು ಮಾತನಾಡದಿದ್ದರೆ ಕಾರ್ಖಾನೆಯ ಭ್ರಷ್ಟ ಹಣ ಕಳೆದ ವಿಧಾನ ಸಭಾ ಚುನಾವಣೆ ಯಲ್ಲೂ ಬಳಕೆ ಆಗಿದೆ ಎಂದು ನಾವು ಅನಿವಾರ್ಯವಾಗಿ ಹೇಳಬೇಕಾಗುತ್ತದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ ಬೈಂದೂರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಎಂ.ಎ. ಗಫೂರ್, ಮುನಿಯಾಲು ಉದಯ್ ಕುಮಾರ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಕುಶಲ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ವೆರೋನಿಕಾ ಕರ್ನೆಲಿಯೋ, ರೋಶನಿ ಒಲಿವೆರಾ, ಬಿ.ಭುಜಂಗ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ದಿನಕರ ಹೇರೂರು, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.