ಉಡುಪಿ : ಅಕ್ಟೋಬರ್ 06:ದ್ರಶ್ಯನ್ಯೂಸ್ :ಸಮಾಜ ಸೇವಕ ವಿಶು ಶೆಟ್ಟಿ ಅವರಿಂದ ಕಳೆದ ಸೆ.೧೦ರಂದು ರಕ್ಷಿಸಲ್ಪಟ್ಟು ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಓಡಿಶಾದ ಮಾನಸಿಕ ಅಸ್ವಸ್ಥ ಭಿಕಾಯ್ (55) ಎಂಬವರು ಇದೀಗ ಗುಣಮುಖರಾಗಿ ಸಮಾಜ ಸೇವಕ ವಿಶು ಶೆಟ್ಟಿ ಅವರ ನೆರವಿನಿಂದ ತನ್ನ ಕುಟುಂಬವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಮಾನಸಿಕ ಅಸ್ವಸ್ಥನಾಗಿ ಉಡುಪಿ, ಮಣಿಪಾಲ ಭಾಗದ ಸಾರ್ವಜನಿಕರ ಮನೆಗಳಿಗೆ ನುಗ್ಗಿ ಭಯದ ವಾತಾವರಣ ಸೃಷ್ಟಿಸಿದ್ದ. ಈತನನ್ನು ವಿಶು ಶೆಟ್ಟಿ ಅವರು ಬಾಳಿಗಾ ಆಸ್ಪತ್ರೆಗೆ ದಾಖಲಿಸಿ, 23 ದಿನಗಳ ಚಿಕಿತ್ಸೆ ಕೊಡಿಸಿದ್ದರು. ಇದೀಗ ಚೇತರಿಸಿಕೊಂಡ ಭಿಕಾಯ್ ತನ್ನ ಮನೆಯ ವಿಳಾಸ ತಿಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಆಸ್ಪತ್ರೆಯ ವೈದ್ಯರು ಹಾಗೂ ಶಾಲಿನಿ ಶರ್ಮ ಅವರ ನೆರವಿನಿಂದ ವ್ಯಕ್ತಿಯ ಕುಟುಂಬದವರನ್ನು ಸಂಪರ್ಕಿಸಿದ ವಿಶು ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.
ವ್ಯಕ್ತಿಯ ಮಗ ಹಾಗೂ ಸಂಬಂಧಿಕರು ಉಡುಪಿಗೆ ಬಂದಿದ್ದು ಭಿಕಾಯ್‌ನನ್ನು ಅವರ ವಶಕ್ಕೆ ಒಪ್ಪಿಸಲಾಯಿತು. ಭಿಕಾಯ್ ಗೋವಾದಲ್ಲಿ ತನ್ನವರೊಂದಿಗೆ ಕಾರ್ಮಿಕನಾಗಿ ದುಡಿಯುತ್ತಿದ್ದು, ಮಾನಸಿಕ ರೋಗಕ್ಕೆ ತುತ್ತಾಗಿ ಕಾಲ್ನಡಿಗೆಯಲ್ಲಿಯೇ ಉಡುಪಿಗೆ ಬಂದಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.
ಆಸ್ಪತ್ರೆಯ ವೆಚ್ಚದಲ್ಲಿ 5೦೦೦ ರೂಪಾಯಿ ಮೊತ್ತವನ್ನು ವಿಶು ಶೆಟ್ಟಿ ಭರಿಸಿ ಮಾನವೀಯತೆ ಮೆರೆದಿದ್ದಾರೆ.
10 ತಿಂಗಳಲ್ಲಿ 17 ಮಂದಿಯನ್ನು ಕುಟುಂಬಕ್ಕೆ ಸೇರಿಸಿದರು ಸಮಾಜ ಸೇವಕ ವಿಶು ಶೆಟ್ಟಿ ಅವರು ಅದೆಷ್ಟೋ ಮಂದಿ ನಿರಾಶ್ರಿತರು, ಮಾನಸಿಕ ಅಸ್ವಸ್ಥರನ್ನು ರಕ್ಷಿಸಿ ಚಿಕಿತ್ಸೆ ನೀಡಿ ಅವರ ಕುಟುಂಬಕ್ಕೆ ಸೇರಿಸಿದ್ದಾರೆ. ಕಳೆದ ಜನವರಿಯಿಂದ ಸೆಪ್ಟೆಂಬರ್ ವರೆಗೆ ಕಳೆದ 10 ತಿಂಗಳಲ್ಲಿ 17 ಮಂದಿಯನ್ನು ರಕ್ಷಿಸಿ ಅವರಿಗೆ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ಕುಟುಂಬಕ್ಕೆ ಹಸ್ತಾಂತರಿಸಿ ನೈಜಾರ್ಥದಲ್ಲಿ ಸಮಾಜ ಸೇವೆಗೈದಿದ್ದಾರೆ, ಈ 17 ಮಂದಿಯಲ್ಲಿ ಪುರುಷರು, ಮಹಿಳೆಯರು, ಯುವಕ, ಯುವತಿಯರಲ್ಲದೆ 3 ಮಂದಿ ಅಪ್ರಾಪ್ತರು ಕೂಡಾ ಸೇರಿದ್ದಾರೆ.