ಚಿತ್ರದುರ್ಗ, ಅಕ್ಟೋಬರ್ 6 :ರಾಜ್ಯದಲ್ಲಿ ಬರಪರಿಸ್ಥಿತಿಯಿಂದ ವಾಸ್ತವಿಕವಾಗಿ ಸುಮಾರು 30 ಸಾವಿರ ಕೋಟಿ ರೂ. ಬೆಳೆಹಾನಿಯಾಗಿದೆ. ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ 4860 ಕೋಟಿ ರೂ. ಪರಿಹಾರವನ್ನು ಕೋರಲಾಗಿದ್ದು, ಈ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಕೇಂದ್ರವನ್ನು ಒತ್ತಾಯಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಚಿತ್ರದುರ್ಗದ ಮುರುಘಾಮಠದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದ ಬರಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿರುವ ಬಗ್ಗೆಪ್ರತಿಕ್ರಿಯೆ ನೀಡುತ್ತಾ, ಕೇಂದ್ರದ ಅಧ್ಯಯನ ತಂಡಕ್ಕೆ ರಾಜ್ಯದಲ್ಲಿ ತಲೆದೋರಿರುವ ಬರಪರಿಸ್ಥಿತಿಯ ವಸ್ತುಸ್ಥಿತಿಯನ್ನು ಈಗಾಗಲೇ ವಿವರಿಸಲಾಗಿದೆ. ಒಟ್ಟು 236 ತಾಲ್ಲೂಕುಗಳಲ್ಲಿ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಸುಮಾರು 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಬೆಳೆಹಾನಿ ಸಂಭವಿಸಿದೆ. 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ಶೇ. 52 ರಷ್ಟು ಬೆಳೆಹಾನಿಯಾಗಿದೆ. ಕೃಷ್ಣಾ ಮೇಲ್ದಂಡೆ ಹಾಗೂ ನಾರಾಯಣಪುರ ಜಲಾಶಯಗಳನ್ನು ಹೊರತುಪಡಿಸಿ , ಕಾವೇರಿ ಸೇರಿದಂತೆ ಇನ್ನುಳಿದ ಜಲಾನಯನ ಪ್ರದೇಶದಗಳಲ್ಲಿ ನೀರಿರುವುದಿಲ್ಲ. ಕೇಂದ್ರದ ಮಾರ್ಗಸೂಚಿಯಂತೆ 4860 ಕೋಟಿ ರೂ.ಗಳ ಪರಿಹಾರವನ್ನು ಕೇಂದ್ರದಿಂದ ಕೋರಲಾಗಿದೆ. ಈ ಬಾರಿ ಹಸಿರು ಬರ ಉಂಟಾಗಿದೆ. ಕೇಂದ್ರದ ಅಧ್ಯಯನ ತಂಡ ಮೂರು ತಂಡಗಳಲ್ಲಿ ರಾಜ್ಯದ 11 ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಅವರು ಕೇಂದ್ರಕ್ಕೆ ವರದಿ ಸಲ್ಲಿಸಿದ ನಂತರ , ವರದಿ ಆಧರಿಸಿದಂತೆ ಕೇಂದ್ರ ಪರಿಹಾರ ನೀಡಲಿದೆ ಎಂದು ತಿಳಿಸಿದರು.
*ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಧಾನ್ಯತೆ :*
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದಲ್ಲಿನ ವಿಳಂಬವಾಗುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಹಿಂದಿನ ಸರ್ಕಾರದವರು ಈ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ, 5300 ಕೋಟಿ ರೂ. ಬಿಡುಗಡೆ ಮಾಡಲಿದೆ ಎಂದಿದ್ದರು. ಆದರೆ ಇದುವರೆಗೆ ಕೇಂದ್ರದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ. ಈ ಮೊತ್ತವನ್ನು ಆದಷ್ಟು ಬೇಗನೆ ಬಿಡುಗಡೆಗೊಳಿಸುವಂತೆ ಕೇಂದ್ರಕ್ಕೆ ಮತ್ತೊಮ್ಮೆ ಕೋರಲಾಗಿದೆ. ನಮ್ಮ ಸರ್ಕಾರವು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ವಿಶೇಷ ಪ್ರಾಧಾನ್ಯತೆ ನೀಡಲಾಗುವುದು. ಪ್ರಸಕ್ತ ವರ್ಷ ಹಾಗೂ ಮುಂದಿನ ವರ್ಷವೂ ಕೂಡ ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
7 ನೇ ವೇತನ ಆಯೋಗದ ಅಧ್ಯಕ್ಷರೊಂದಿಗೆ ಮಾತನಾಡಿದ್ದು, ವರದಿ ಸಲ್ಲಿಕೆಯಾದ ನಂತರ ತೀರ್ಮಾನ ಕೈಗೊಳ್ಳಲಾಗುವುದು. ನಿಗಮ ಮಂಡಳಿಗಳ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.