ಕುಂದಾಪುರ: ಅ.6: ದೃಶ್ಯ ನ್ಯೂಸ್ : ಉಡುಪಿ ಜಿಲ್ಲೆಯ ಕುಂದಾಪುರದ ಚಿಕ್ಕನ್‌ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್ ಬಳಿ ರವಿವಾರ ಸಂಜೆ ಚೂರಿ ಇರಿದು ಕುಂದಾಪುರದ ನಿವಾಸಿ ರಾಘವೇಂದ್ರ (42) ಅಲಿಯಾಸ್ ಬನ್ಸ್ ರಾಘು ಎನ್ನುವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರವಿವಾರ ಸಂಜೆ ಕೃತ್ಯ ನಡೆದ ತಕ್ಷಣವೇ ಪೊಲೀಸ್ ಇಲಾಖೆ ಆರೋಪಿ ಬಂಧನಕ್ಕೆ ಕಾರ್ಯಪ್ರವೃತ್ತರಾಗಿದ್ದು ತದನಂತರ ಉಡುಪಿ ಎಸ್ಪಿ ಡಾ. ಅರುಣ್ ಕೆ. ಅವರು ಮೂರು ವಿಶೇಷ ತನಿಖಾ ತಂಡ ರಚಿಸಿದ್ದರು. ಪೊಲೀಸರ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು ಸಿಸಿ ಟಿವಿ ದೃಶ್ಯಾವಳಿ ಸಹಿತ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕಿ ಆರೋಪಿಗಳ ಪತ್ತೆಗೆ ಶಿವಮೊಗ್ಗ, ಬೆಂಗಳೂರು ಸಹಿತ ವಿವಿಧ ಕಡೆಗಳಿಗೆ ತನಿಖಾ ತಂಡ ತೆರಳಿತ್ತು ಎನ್ನಲಾಗಿದೆ.
ಪೊಲೀಸರ ಒಂದು ತಂಡ ಶಿವಮೊಗ್ಗ ಮೂಲದವರು ಎನ್ನಲಾದ ಇಬ್ಬರು ಆರೋಪಿಗಳನ್ನು ಗುರುವಾರ ವಶಕ್ಕೆ ಪಡೆದಿದ್ದು ಕೊಲೆಗೆ ನಿಖರ ಕಾರಣ ಏನೆಂಬ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.
ಕುಂದಾಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.