ಉಡುಪಿ :ಅಕ್ಟೋಬರ್ 05:ದ್ರಶ್ಯ ನ್ಯೂಸ್ :ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥಗೊಂಡು ರಾತ್ರಿ ವೇಳೆ ವಿವಸ್ತ್ರಳಾಗಿ ತಿರುಗಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸಾಮಾಜಿಕ ಕಾರ್ಯಕರ್ತರು ಹಾಗೂ ಪೊಲೀಸರ ನೆರವಿನಿಂದ ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಸ್ನೇಹಾಲಯಕ್ಕೆ ಬುಧವಾರ ದಾಖಲಿಸಿದ್ದಾರೆ.
ಮಹಿಳೆ ಮಂಜುಳಾ (40) ಅವರಿಗೆ ಮಂಗಳವಾರ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿ ನಂತರ ಸಖಿ ಸೆಂಟರಿಗೆ ದಾಖಲಿಸಲಾಯಿತು. ಅಲ್ಲಿಂದ ಬುಧವಾರ ಮಹಿಳೆಗೆ ಹೆಚ್ಚಿನ ಚಿಕಿತ್ಸೆ ಹಾಗೂ ಪುನರ್ವಸತಿಗಾಗಿ ವಿಶು ಶೆಟ್ಟಿ ಅವರು ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಅವರನ್ನು ಸಂಪರ್ಕಿಸಿದಾಗ ಅವರು ಮಹಿಳೆಗೆ ಆಶ್ರಯ ನೀಡಲು ಒಪ್ಪಿದ್ದಾರೆ.
ಶಿರ್ವ ಠಾಣಾ ಪೊಲೀಸರು ಕಾನೂನು ಪ್ರಕ್ರಿಯೆ ನಡೆಸಿದರು. ಮಹಿಳೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ಮಹಿಳಾ ಪೊಲೀಸ್ ಸಂಗೀತಾ, ಸಾಮಾಜಿಕ ಕಾರ್ಯಕರ್ತರಾದ ಶ್ರೀಮತಿ ಶಕಿಲಾ ಕಟಪಾಡಿ, ಶ್ರೀಮತಿ ಪ್ರೇಮ ಕೊರಂಗ್ರಪಾಡಿ, ರಾಮದಾಸ್ ಪಾಲನ್ ಉದ್ಯಾವರ, ಗಣೇಶ್ ಕಾಂಚನ್ ಹಾಗೂ ಲೋಕೇಶ್ ಕುಕ್ಕುಡೆ ಸಹಕರಿಸಿದರು.
ಮಹಿಳೆಯ ವಾರೀಸುದಾರರು ಇದ್ದಲ್ಲಿ ಶಿರ್ವ ಠಾಣೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.