ಬೆಂಗಳೂರು: ಅಕ್ಟೋಬರ್: 04: ದೃಶ್ಯ ನ್ಯೂಸ್ : ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ತೀವ್ರ ಅನಾರೋಗ್ಯಕ್ಕೀಡಾಗಿದ್ದು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರನ್ನು ನಿನ್ನೆ ಹಾಸನದಿಂದ ಕರೆದುಕೊಂಡು ಬಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಎಂದು ದತ್ತು ಪುತ್ರ ಬಳ್ಳೂರು ಉಮೇಶ್ ಮಾಹಿತಿ ನೀಡಿದ್ದಾರೆ.
ತಿಮ್ಮಕ್ಕ ಹಾಸನ ಜಿಲ್ಲೆಯ ಬೇಲೂರಿನಲ್ಲಿ ವಾಸವಿದ್ದರು. ಬೇಲೂರು ಮಲೆನಾಡು ಪ್ರದೇಶ ಆಗಿರುವುದರಿಂದ ಶೀತ ಜಾಸ್ತಿಯಾಗಿದೆ. ಮೂರು ದಿನಗಳಿಂದ ಸ್ವಲ್ಪ ಉಸಿರಾಟದ ಸಮಸ್ಯೆಯಾಗಿತ್ತು. ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕವೂ ಕಡಿಮೆಯಾಗಿರಲಿಲ್ಲ. ಹೀಗಾಗಿ ಬೆಂಗಳೂರಿಗೆ ಕರೆತಂದಿದ್ದೇವೆ. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ದತ್ತು ಪುತ್ರ ಉಮೇಶ್ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ತಿಮ್ಮಕ್ಕ ಬೆಂಗಳೂರಿನ ಮಂಜುನಾಥನಗರದಲ್ಲಿರುವ ನಿವಾಸದಲ್ಲಿ ಕಾಲು ಜಾರಿ ಬಿದ್ದು ಬೆನ್ನು ಮೂಳೆಗೆ ಪೆಟ್ಟಾಗಿತ್ತು. ಹಾಗಾಗಿ ಅವರನ್ನು ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ ಬಳಿಕ ಸಾಲುಮರದ ತಿಮ್ಮಕ್ಕ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಳ್ಳೂರಿನರುವ ನಿವಾಸದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು.