ಬೆಂಗಳೂರು: ಅ.3: ದೃಶ್ಯ ನ್ಯೂಸ್ : ಇಂಡಿಗೊ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ ಆರೋಪದಡಿ ಪ್ರಯಾಣಿಕ ಸ್ವಪ್ನಿಲ್ ಹೋಲೆ ಅವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ನಾಗಪುರ ನಿವಾಸಿ ಸ್ವಪ್ನಿಲ್ ಈ ಕೃತ್ಯ ಎಸಗಿದ್ದ. ಇಂಡಿಗೊ ಏರ್‌ಲೈನ್ಸ್ ಕಂಪನಿ ಪ್ರತಿನಿಧಿ ನೀಡಿದ್ದ ದೂರು ಆಧರಿಸಿ ಸ್ವಪ್ನಿಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಸ್ವಪ್ನಿಲ್, ನಾಗಪುರದಿಂದ ಬೆಂಗಳೂರು ಮಾರ್ಗವಾಗಿ ಬ್ಯಾಂಕಾಕ್‌ಗೆ ಇಂಡಿಗೊ 6ಇ–6803 ವಿಮಾನದಲ್ಲಿ ಹೊರಟಿದ್ದ. ಸೀಟ್ ನಂಬರ್ ‘5ಇ’ಯಲ್ಲಿ ಕುಳಿತಿದ್ದ. ಪ್ರಯಾಣದ ವೇಳೆಯಲ್ಲಿ ತನ್ನ ಪಕ್ಕದಲ್ಲಿದ್ದ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ.
ಈತನ ಕೃತ್ಯವನ್ನು ನೋಡಿದ್ದ ವಿಮಾನದ ಸಿಬ್ಬಂದಿ, ಸ್ಥಳಕ್ಕೆ ಹೋಗಿ ಬಾಗಿಲು ತೆರೆಯುವುದನ್ನು ತಡೆದಿದ್ದರು. ಘಟನೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಆರೋಪಿಯನ್ನು ವಶಕ್ಕೆ ಪಡೆದಿದ್ದ ಭದ್ರತಾ ಸಿಬ್ಬಂದಿ, ಠಾಣೆಗೆ ಒಪ್ಪಿಸಿದ್ದಾರೆ.
ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ವಿಮಾನ ಪ್ರಯಾಣಿಕರ ಜೀವಕ್ಕೆ ಆಪತ್ತು ತರುವ ಕೃತ್ಯ ಇದಾಗಿದೆ. ಯಾವ ಕಾರಣಕ್ಕೆ ಆರೋಪಿ ಬಾಗಿಲು ತೆರೆಯಲು ಪ್ರಯತ್ನಿಸಿದ ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.