ಕುಂದಾಪುರ : ಅಕ್ಟೋಬರ್ 02:ದ್ರಶ್ಯ ನ್ಯೂಸ್ : ನಿನ್ನೆ (ಭಾನುವಾರ)ಸಂಜೆ ಹೊತ್ತಿಗೆ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಕುಂದಾಪುರದ ಖಾರ್ವಿಕೇರಿ ನಿವಾಸಿ ರಾಘವೇಂದ್ರ ಶೇರುಗಾರ್(42) ಅಲಿಯಾಸ್ ಬನ್ಸ್ ರಾಘು ಇಂದು (ಸೋಮವಾರ) ಬೆಳಿಗ್ಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಚಿಕ್ಕಮ್ಮನಸಾಲು ರಸ್ತೆಯ ಪೋಸ್ಟ್ ಆಫೀಸ್ ಬಳಿ ಕಾರು ಸೈಡ್ ಕೊಡುವ ವಿಚಾರದಲ್ಲಿ ಆದ ಗಲಾಟೆ ತೀವ್ರಗೊಂಡು ವ್ಯಾಗನರ್ ಕಾರಿನಲ್ಲಿದ್ದ ವ್ಯಕ್ತಿ ರಾಘವೇಂದ್ರ ಅವರ ತೊಡೆಯ ಭಾಗಕ್ಕೆ ಚೂರಿಯಿಂದ ಇರಿದು ಪರಾರಿಯಾಗಿದ್ದ.
ತೀವ್ರ ರಕ್ತಸ್ರಾವದೊಂದಿಗೆ ಒದ್ದಾಡುತ್ತಿದ್ದ ರಾಘವೇಂದ್ರ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೊಡೆ ಭಾಗಕ್ಕೆ ಆಳವಾಗಿ ಗಾಯವಾದ ಹಿನ್ನೆಲೆ ತೀವ್ರರಕ್ತಸ್ರಾವವಾಗಿದ್ದು, ಭಾನುವಾರ ತಡರಾತ್ರಿಯೇ ಶಸ್ತ್ರಚಿಕಿತ್ಸೆಗೊಳಪಡಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ರಾಘವೇಂದ್ರ ಅವರು,ಕಳೆದ ಕೆಲ ವರ್ಷಗಳಿಂದ ಕುಂದಾಪುರದಲ್ಲಿ ವಾಸವಾಗಿದ್ದರು.ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸದ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು ಆರೋಪಿ ಶಿವಮೊಗ್ಗ ಮೂಲದವನು ಎಂದು ತಿಳಿದುಬಂದಿದೆ.ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.