ಉತ್ತಮ ಸಂಘಟಕರಾಗಿ ಸಾಮಾಜಿಕ, ಧಾರ್ಮಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುವ ಬಿಜೆಪಿ ಉಡುಪಿ ನಗರ ಮಂಡಲಾಧ್ಯಕ್ಷ ಮಹೇಶ್ ಠಾಕೂರ್ ರವರು ಪ್ರಸಕ್ತ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.
ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿವಿಧ ಕ್ರೀಡಾ ಕೂಟಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿರುವ ಠಾಕೂರ್ ರವರು ಇದೀಗ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಉಪಾಧ್ಯಕ್ಷರಾಗಿ ಪದೋನ್ನತಿ ಹೊಂದಿರುವುದು ಅಭಿನಂದನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ 3 ಜಿಲ್ಲೆಗಳ ಕ್ರೀಡಾ ಕೂಟದ ಸಂಘಟನಾ ಕಾರ್ಯದರ್ಶಿಯಾಗಿ, ರಾಜ್ಯ ಮಟ್ಟದ ಹಿರಿಯರ ಕ್ರೀಡಾ ಕೂಟದ ಕಾರ್ಯದರ್ಶಿಯಾಗಿ, ರಾಜ್ಯ ಮಟ್ಟದ ಕಿರಿಯರ ಕ್ರೀಡಾ ಕೂಟ, ಅಖಿಲ ಭಾರತ ದಕ್ಷಿಣ ವಲಯ ಕ್ರೀಡಾ ಕೂಟ, 23ರ ವಯೋಮಿತಿಯ ಪುರುಷರ ಮತ್ತು ಮಹಿಳೆಯರ ಕ್ರೀಡಾ ಕೂಟ ಹಾಗೂ 20 ಮತ್ತು 23ರ ವಯೋಮಿತಿಯ ಅಥ್ಲೆಟಿಕ್ ಚಾಂಪಿಯನ್ಶಿಪ್ ನ್ನು ಯಶಸ್ವಿಯಾಗಿ ನಿರ್ವಹಿಸಿ ಸೈ ಎನಿಸಿಕೊಂಡಿರುವ ಮಹೇಶ್ ಠಾಕೂರ್ ರವರ ಮುಂದಿನ ಕಾರ್ಯ ಯೋಜನೆಗಳು ಫಲಪ್ರದವಾಗುವ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಇನ್ನಷ್ಟು ಅತ್ಯಮೂಲ್ಯ ಸೇವೆ ದೊರಕುವಂತಾಗಲಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.