ಮಣಿಪಾಲ ಸೆಪ್ಟೆಂಬರ್ 29:ದ್ರಶ್ಯ ನ್ಯೂಸ್: ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಮಣಿಪಾಲದ ಬಹು ನಿರೀಕ್ಷಿತ ಮಣಿಪಾಲ್ ಮ್ಯಾರಥಾನ್‌ನ 6 ನೆಯ ಆವೃತ್ತಿಯನ್ನು ಘೋಷಿಸಿದ್ದು ಇದು 2024 ಫೆಬ್ರವರಿ 11 ರಂದು ನಡೆಯಲಿದೆ.
ಈ ಸಲದ ಮ್ಯಾರಥಾನ್ ‘ಜೀವನ್ಮರಣ l ಪ್ರಾಣಾಂತಿಕ)ಕಾಯಿಲೆಯನ್ನು ಅನುಭವಿಸುತ್ತಿರುವ ರೋಗಿಗಳಿಗೆ ಪ್ರಶಾಮಕ ಆರೈಕೆ ಕೇಂದ್ರ [ಹಾಸ್ಪಿಸ್ ಕೇರ್] ಎಂಬ ಉದಾತ್ತ ಆಶಯವನ್ನು ಹೊಂದಿದೆ. ‘ನಾವು ನಿಮ್ಮ ಜೊತೆ ಸದಾ ಇದ್ದೇವೆ’ ಎಂಬುದು ಈ ಸಲದ ಘೋಷವಾಕ್ಯವಾಗಿದೆ.
ಈ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಜಗತ್ತಿನ ವಿವಿಧ ಭಾಗಗಳಿಂದ ಆಸಕ್ತರು ಆಗಮಿಸುತ್ತಿದ್ದು ಉದಾತ್ತ ಆಶಯಕ್ಕಾಗಿ ಸಾಂಸ್ಕೃತಿಕ ಎಲ್ಲೆಗಳನ್ನು ಮೀರಿದ ಸಂವೇದನಾಶೀಲ ಮತ್ತು ಉತ್ಸವದ ವಾತಾವರಣವನ್ನು ಉಂಟುಮಾಡಲಿದ್ದಾರೆ. ವಿವಿಧ ಹರೆಯದ ಸುಮಾರು 15,000 ಮಂದಿ ಈ ಮ್ಯಾರಥಾನ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಹಿಂದಿನ ಮ್ಯಾರಥಾನ್‌ನ ಆವೃತ್ತಿಗಳಲ್ಲಿ ಇಥಿಯೋಪಿಯಾ, ಕೀನ್ಯಾ, ಇಂಗ್ಲೆಂಡ್, ನೇಪಾಲ, ಮೆಲೇಶ್ಯಾ, ಅಮೆರಿಕ ಮತ್ತು ಶ್ರೀಲಂಕಾದಿಂದ ಆಸಕ್ತರು ಆಗಮಿಸಿದ್ದರು. ಮುಂಬರುವ 2024 ರ ಮ್ಯಾರಥಾನ್ ಇನ್ನೂ ಹೆಚ್ಚಿನ ಅಂತಾರಾಷ್ಟ್ರೀಯ ಪ್ರತಿಭೆಗಳನ್ನು ಆಕರ್ಷಿಸುವ ಭರವಸೆಯನ್ನು ಹೊಂದಿದೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮಣಿಪಾಲದ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಅವರು ‘ಓಟದ ಮೂಲಕ ಒಂದಾಗುವ’ ಆಶಯವನ್ನು ಎತ್ತಿ ಹಿಡಿಯುತ್ತ, ‘2024 ರಲ್ಲಿ ಜರಗುವ ಮಣಿಪಾಲ್ ಮ್ಯಾರಥಾನ್‌ನ 6 ನೆಯ ಆವೃತ್ತಿ ಎಂಬುದು ಕೇವಲ ಓಟವಲ್ಲ, ಜೀವನ್ಮರಣದ ಹೋರಾಟದ ಸ್ಥಿತಿಯಲ್ಲಿರುವ ರೋಗಿಗಳ ಆರೈಕೆ ಎಂಬ ಉದಾತ್ತ ಉದ್ದೇಶವನ್ನು ಬೆಂಬಲಿಸಲು ಜಾಗತಿಕ ಸಮುದಾಯವು ಒಂದಾಗುವ ವೇದಿಕೆಯಾಗಿದೆ. ‘ನಾವು ನಿಮ್ಮೊಂದಿಗೆ ಸದಾ ಇದ್ದೇವೆ’ ಎಂಬ ಘೋಷವಾಕ್ಯದೊಂದಿಗೆ ಜಗತ್ತಿನಾದ್ಯಂತದ ಉತ್ಸಾಹಿ ಓಟಗಾರರನ್ನು ಈ ಸುಂದರ ಮ್ಯಾರಥಾನ್‌ಗೆ ಆಹ್ವಾನಿಸಲು ಅಭಿಮಾನಪಡುತ್ತೇವೆ.
ಈ ಮೂಲಕ ಮಾರಣಾಂತಿಕ ಕಾಯಿಲೆಯ ವಿರುದ್ಧ ಹೋರಾಡುತ್ತಿರುವ ಜೀವಗಳ ಘನತೆ ಮತ್ತು ಗೌರವಗಳನ್ನು ಎತ್ತಿಹಿಡಿದು ಅವರ ಬದುಕಿಗೆ ಉತ್ತಮ ಭರವಸೆ ನೀಡುವ ಉದ್ದೇಶವಾಗಿದೆ’ ಎಂದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಅವರು, ಈ ಮ್ಯಾರಥಾನ್‌ನ ಕುರಿತು ಮಾತನಾಡುತ್ತ, ‘ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಉಪಕುಲಪತಿಯಾಗಿ ನಾನು ಮಣಿಪಾಲ್ ಮ್ಯಾರಥಾನ್‌ನ ಪಥದ ಕುರಿತು ಅಭಿಮಾನದಿಂದ ಹೇಳಿಕೊಳ್ಳಬಯಸುತ್ತೇನೆ.
ಈ ಸಲದ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವವರಿಗೆ ಓಟ ಎಂಬುದು ಕೇವಲ ದೈಹಿಕ ಕ್ರಿಯೆಯಲ್ಲ, ಅದು, ಮಣಿಪಾಲ-ಉಡುಪಿದುದ್ದಕ್ಕೂ ಇರುವ ಕರಾವಳಿಯ ಸೌಂದರ್ಯವನ್ನು ಕಾಣುವ ಅವಕಾಶವೂ ಹೌದು. ಮಲ್ಪೆ ಕಡಲತೀರದ ಓಟ ಈ ಸಲದ ಮ್ಯಾರಥಾನ್‌ನ ಪಥದ ಹೆಚ್ಚುಗಾರಿಕೆಯಾಗಿದೆ. ನೀವು ಮ್ಯಾರಥಾನ್‌ನಲ್ಲಿ ಈಗಾಗಲೇ ಪಾಲ್ಗೊಂಡವರಿರಬಹುದು, ಪಾಲ್ಗೊಳ್ಳದ ಆರಂಭಿಕರಿರಬಹುದು, ಯಾವುದೇ ಪ್ರಾಯದವರಾಗಿರಬಹುದು, ಎಷ್ಟೇ ದೂರವನ್ನು ಕ್ರಮಿಸಬಹುದು, ಆದರೆ, ಪ್ರತಿಯೊಬ್ಬರಿಗೂ ಈ ಮ್ಯಾರಥಾನ್‌ನಲ್ಲಿ ಅವಕಾಶ ಇದ್ದೇ ಇದೆ’ ಎಂದರು.
ಕೆ. ರಘುಪತಿ ಭಟ್, ಗೌರವ ಸಲಹೆಗಾರರು, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಹಾಗು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅವರು ಮ್ಯಾರಥಾನ್‌ಗೆ ತಮ್ಮ ತುಂಬು ಹೃದಯದ ಪ್ರೋತ್ಸಾಹವನ್ನು ವ್ಯಕ್ತಪಡಿಸುತ್ತ, ‘ಕ್ರೀಡೆ ಮತ್ತು ಸಾಮುದಾಯಿಕ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿ ಮಣಿಪಾಲ್ ಮ್ಯಾರಥಾನ್‌ನ್ನು ಆಯೋಜಿಸಲಾಗುತ್ತಿದೆ. ಈ ಓಟವು ಉತ್ತಮ ಆರೋಗ್ಯ ಮತ್ತು ಕ್ರಿಯಾಶೀಲ ಜೀವನಶೈಲಿಗೆ ಪೂರಕವಾಗಿರುವುದರ ಜೊತೆಗೆ ರೋಗಿಗಳ ಪ್ರಶಾಮಕ ಆರೈಕೆ ಕೇಂದ್ರದಂತ ಉದಾತ್ತ ಆಶಯವನ್ನು ಕೂಡ ಹೊಂದಿದೆ ಎಂದರು.
ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಡೀನ್ ಹಾಗೂ ಉಪಶಾಮಕ ಹಾಗೂ ಜೀವನ್ಮರಣ ಸ್ಥಿತಿಯಲ್ಲಿರುವ ರೋಗಿಗಳ ಪ್ರಶಾಮಕ ಆರೈಕೆ ಕೇಂದ್ರದ ಮುಖ್ಯಸ್ಥ ಡಾ. ನವೀನ್ ಸಾಲಿನ್ಸ್ ಅವರು ಮಣಿಪಾಲದ ಮ್ಯಾರಥಾನ್‌ನ ಉದಾತ್ತ ಆಶಯದ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತ, ‘2024ರಲ್ಲಿ ನಡೆಯಲಿರುವ ಮಣಿಪಾಲ ಮ್ಯಾರಥಾನ್‌ನ 6ನೆಯ ಆವೃತ್ತಿಯ ಪಯಣಕ್ಕಾಗಿ ಸಜ್ಜುಗೊಳ್ಳುತ್ತಿರುವಾಗ ಜೀವನ್ಮರಣ ಸ್ಥಿತಿಯಲ್ಲಿರುವ ರೋಗಿಗಳ ಪ್ರಶಾಮಕ ಆರೈಕೆ ಕೇಂದ್ರ ದ ಭವಿಷ್ಯದ ಕುರಿತು ದೃಷ್ಟಿ ಹರಿಸುವುದಕ್ಕಾಗಿ ಅಭಿಮಾನ ಪಡುತ್ತೇನೆ.
ಯಾರಿಗೆ ಆವಶ್ಯಕವಿದೆಯೋ ಅಂಥವರಿಗೆ ಕರುಣಾಮಯದ ಮತ್ತು ಘನತೆಯ ಕಾಳಜಿಯನ್ನು ಹೊಂದುವ ನಮ್ಮ ಬದ್ಧತೆಗೆ ಮಣಿಪಾಲ ಮ್ಯಾರಥಾನ್‌ನ ಉದಾತ್ತ ಆಶಯವು ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ನಮ್ಮ ನೂತನ ’ಜೀವನ್ಮರಣ ಸ್ಥಿತಿಯಲ್ಲಿರುವ ರೋಗಿಗಳ ಪ್ರಶಾಮಕ ಆರೈಕೆ ಕೇಂದ್ರ ದ ಯೋಜನೆ’ಯು ಉಪಶಾಮಕ ಆರೈಕೆ [ಪೆಲೇಟಿವ್ ಕೇರ್] ಯ ಸ್ವರೂಪದಲ್ಲಿ ಉತ್ತಮ ಬದಲಾವಣೆಯನ್ನು ತರಲಿದ್ದು ಪ್ರಾಣಾಂತಿಕ ಕಾಯಿಲೆಯಿಂದ ಬಳಲುವರಿಗೆ ಅಗತ್ಯವಿರುವ ದೈಹಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬೆಂಬಲವನ್ನು ನೀಡಲಿದೆ. ಮ್ಯಾರಥಾನ್‌ನ ಆಶಯವು ಜಾಗೃತಿಯನ್ನು ಉಂಟುಮಾಡುವುದರ ಜೊತೆಗೆ, ಈ ಮಹತ್ತ್ವದ ವಿಷಯಕ್ಕೆ ಆವಶ್ಯಕ ಬೆಂಬಲವನ್ನೂ ನೀಡುತ್ತದೆ. ಅಲ್ಲದೆ, ಸಮಾಧಾನ, ಸಾಂತ್ವನ ಮತ್ತು ಭರವಸೆಯನ್ನು ನೀಡುವುದರ ಮೂಲಕ ರೋಗಿಗಳ ಮತ್ತು ಅವರ ಕುಟುಂಬಗಳ ಬದುಕಿನಲ್ಲಿ ಪರಿವರ್ತನೆಯನ್ನು ಉಂಟುಮಾಡಲಿದೆ’ಎಂದರು.
ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ಶ್ರೀ ಮಹೇಶ್ ಠಾಕೂರ್ ಅವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಶ್ರೀ ಕೆಂಪರಾಜ್ ಅವರು ಮಣಿಪಾಲ ಮ್ಯಾರಥಾನ್‌ನ ಪಯಣದ ಭಾಗವಾಗಿರುವುದಕ್ಕೆ ಹೆಮ್ಮೆಯನ್ನು ತಿಳಿಸಿದರು.
ಮಾಹೆಯ ಕ್ರೀಡಾಮಂಡಳಿಯ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ಸ್ವಾಗತಿಸಿ, ಮೋನಿಕಾ ಜಾಧವ್ ಧನ್ಯವಾದ ಸಮರ್ಪಿಸಿದರು.
ಆಕರ್ಷಕ ನಗದು ಬಹುಮಾನ, ಉತ್ಸವದ ವಾತಾವರಣ, ಸ್ವಾದಿಷ್ಟ ತಿನಿಸುಗಳು, ಉತ್ಕೃಷ್ಟವಾದ ಮ್ಯಾರಥಾನ್ ಸಲಕರಣೆಗಳು ಸೇರಿದಂತೆ ಮಣಿಪಾಲ್ ಮ್ಯಾರಥಾನ್‌ನ ಹಲುವು ವಿಶೇಷತೆಗಳನ್ನು ಒಳಗೊಂಡಿದೆ. ಮಣಿಪಾಲ್ ಮ್ಯಾರಥಾನ್-2024 ಕ್ಕಾಗಿ ನೋಂದಾವಣೆ ಶೀಘ್ರದಲ್ಲಿ ಆರಂಭಗೊಳ್ಳಲಿರುವುದು.
ಸಮಾಜದ ಮೇಲೆ ಧನಾತ್ಮಕ ಪರಿಣಾಮ ಬೀರುವ ಬದ್ದತೆಯನ್ನು ಹೊಂದಿರುವ, ಕ್ರೀಡಾಮನೋಭಾವದ ಉತ್ಸಾಹಿಗಳನ್ನು ಒಂದಾಗಿಸುವ ಈ ರೋಮಾಂಚಕ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ.
ನೋಂದಣಿಗಾಗಿ ದಯವಿಟ್ಟು ಭೇಟಿ ನೀಡಿ:
Link: www.manipalmarathon.in (ಅಕ್ಟೋಬರ್ 15 ರಿಂದ ನೋಂದಣಿ ಪ್ರಾರಂಭವಾಗುತ್ತದೆ)