ಉಡುಪಿ: ಸೆಪ್ಟೆಂಬರ್ 27: ದೃಶ್ಯ ನ್ಯೂಸ್ : ಜಿಲ್ಲಾಡಳಿತ ಹಾಗೂ ಸರಕಾರದ ನೀತಿಗಳನ್ನು ಖಂಡಿಸಿ ಕಟ್ಟಡ ಸಾಮಾಗ್ರಿ ಸಾಗಾಟ ಮಾಡುವ ಲಾರಿ, ಟೆಂಪೋ ಚಾಲಕ ಮಾಲಕರು ಅನಿರ್ದಿಷ್ಟವಾದಿ ಮುಷ್ಕರ ಕೈಗೊಂಡಿದ್ದಾರೆ. ಮುಷ್ಕರದ ಹಿನ್ನಲೆ ಉದ್ಯಾವರ, ಕಟಪಾಡಿ, ಬ್ರಹ್ಮಾವರ,ಕೋಟ ಸಾಸ್ತಾನ, ಕುಂದಾಪುರ, ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ತಮ್ಮ ಟೆಂಪೋ ಹಾಗೂ ಲಾರಿಗಳನ್ನು ರಸ್ತೆಗೆ ಇಳಿಸದೇ ಸಾಲುಗಟ್ಟಿ ಪಾರ್ಕಿಂಗ್ ಮಾಡಿ ರಸ್ತೆ ಬದಿ ನಿಲ್ಲಿಸಿದ್ದಾರೆ.
ಒನ್ ಸ್ಟೇಟ್ ಒನ್ ಜಿಪಿಎಸ್, ಲಾರಿ ಗಳ ಮೇಲೆ ಅಕ್ರಮ ಸಾಗಾಟ ನೆಪದಲ್ಲಿ ಕೇಸ್, ಪರವಾನಿಗೆ ಅವ್ಯವಸ್ಥೆ ಮತ್ತು ಜಿಲ್ಲಾಡಳಿತದ ಏಕಾಏಕಿ ಹೊಸ ನಿಯಮಗಳ ಜಾರಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಲಾರಿ ಮಾಲಕರು ಸಮಸ್ಯೆ ಬಗೆಹರಿಯುವ ವರೆಗೆ ಮುಷ್ಕರ ಮುಂದುವರೆಸಲು ಪಟ್ಟು ಹಿಡಿದಿದ್ದಾರೆ.
ಲಾರಿಯವರು ದಂಧೆ ಕೋರರು ಎನ್ನಲು ನೀವ್ಯಾರು? ಹಿಂದೆ ಇದ್ದ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳಲಿಲ್ಲ. ನೀವು ಅನಾದಿ ಕಾಲದಿಂದಲೂ ಶಿಸ್ತು ಬದ್ದ ಪರವಾನಿಗೆ ವ್ಯವಸ್ಥೆ ಯಾಕೆ ಮಾಡಿಲ್ಲ? ಕೋಟಾ ನೋಟ್ ಪ್ರಿಂಟ್ ಮಾಡಿದ ಹಾಗೆ ನಾವು ಪರವಾನಿಗೆ ಪ್ರಿಂಟ್ ಮಾಡಲು ಆಗುತ್ತದಾ? ನಮ್ಮನ್ನು ಯಾಕೆ ಬಲಿಪಶು ಮಾಡುತ್ತಿದ್ದೀರಿ?ಲಾರಿಯವರ ಮೇಲೆ ದೊಡ್ಡ ದೊಡ್ಡ ಕೇಸ್ ಹಾಕುತ್ತಿದ್ದಾರೆ. ಕಟ್ಟಡ ಸಾಮಾಗ್ರಿಗಳು ಇಲ್ಲದಿದ್ದರೆ ಎಲ್ಲರಿಗೂ ಸಮಸ್ಯೆ ಎಂದು ಸರ್ಕಾರದ ನಡೆ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಒಂದು ಲೋಡ್ ಜಲ್ಲಿ ಕಲ್ಲುಮೊದಲು 10 ಸಾವಿರಕ್ಕೆ ಸಿಗುತ್ತಿತ್ತು ಇವತ್ತು 20 ಸಾವಿರವಾಗಿದೆ. ಇದಕ್ಕೆ ನೇರ ಕಾರಣ ಜಿಲ್ಲಾಡಳಿತ ನಿಮ್ಮ ಅಹಂಕಾರಕ್ಕೆ ನಮ್ಮ ಉತ್ತರ. ನಮಗೆ ಮುಂದಿನ ದಾರಿ ಯಾವುದೆಂದು ತೋರುತ್ತಿಲ್ಲ. ಒಂದು ವೇಳೆ ಜಿಲ್ಲೆಯಲ್ಲಿ ಲಾರಿ ಮಾಲಕರ ಮೇಲೆ ದಬ್ಬಾಳಿಕೆ ನಡೆದರೆ, ಎಲ್ಲಾ ವಾಹನಗಳನ್ನು ಪೋಲಿಸ್ ಠಾಣೆಯು ಮುಂದೆ ನಿಲ್ಲಿಸಿ ನಮ್ಮನ್ನು ಬಂಧಿಸುವಂತೆ ಆಂದೋಲನ ನಡೆಸುತ್ತವೆ ಎಂದು ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಸಾಗಾಟಗಾರರ ಸಂಘದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕಟಪಾಡಿ ಎಚ್ಚರಿಕೆ ನೀಡಿದ್ದಾರೆ ಮಾತ್ರವಲ್ಲದೇ ಇಂದು ನಾವು ಬೀದಿಗೆ ಬರಲು ಸರಕಾರ ಹಾಗೂ ಜಿಲ್ಲಾಡಳಿತವೇ ನೇರ ಕಾರಣ. ನಮಗೆ ನ್ಯಾಯ ಸಿಗುವ ತನಕ, ನಮ್ಮ ಪ್ರಾಣ ಇರುವ ತನಕ ಈ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು