ಬೆಳಗಾವಿ: ಸೆಪ್ಟೆಂಬರ್ 26: ದೃಶ್ಯ ನ್ಯೂಸ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಣ್ಣ ಖಾತೆಯಲ್ಲ. ಈ ಮೊದಲು ಇದನ್ನು ಕೆಳಮಟ್ಟದಲ್ಲಿ ನೋಡಲಾಗುತ್ತಿತ್ತು. ಈಗ ವಿಶ್ವವೇ ನೋಡುವಂತಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಪೋಷಣ ಮಾಸಾಚರಣೆ ಮತ್ತು ಇಲಾಖೆಯ ವಿವಿಧ ನೂತನ ಸಂಸ್ಥೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಭಾಯಿಸುವ ಭಾಗ್ಯ ನನಗೆ ಸಿಕ್ಕಿದೆ. ನಿಜವಾಗಿಯೂ ಪುಣ್ಯದ ಕೆಲಸ ಇದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಂದಾಗಿ ಇಂತಹ ಅವಕಾಶ ನನಗೆ ಸಿಕ್ಕಿದೆ. ಗೃಹಲಕ್ಷ್ಮೀ ಯೋಜನೆಯಿಂದಾಗಿ ಈ ಇಲಾಖೆಯ ಕಡೆಗೆ ವಿಶ್ವವೇ ನೋಡುವಂತಾಗಿದೆ ಎಂದು ಹೆಬ್ಬಾಳಕರ್ ಹೇಳಿದರು.
ಹಳ್ಳಿಯಲ್ಲಿ ಹುಟ್ಟಿ, ಸರಕಾರಿ ಬಸ್ ಗಳಲ್ಲಿ ಓಡಾಡಿ, ಸರಕಾರಿ ಶಾಲೆಯಲ್ಲಿ ಕಲಿತು ಇಂದು ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ನಾನು 3ನೇ ತರಗತಿಯಲ್ಲಿರುವಾಗಲೆ ವೈದ್ಯೆಯಾಗುವ ಕನಸು ಕಟ್ಟಿಕೊಂಡಿದ್ದೆ. ಆದರೆ ಈಗ ಮಂತ್ರಿಯಾಗಿ ಇಂತಹ ದೊಡ್ಡ ಯೋಜನೆ ನಿರ್ವಹಿಸುವ, ನಿಮ್ಮೆಲ್ಲರ ಸೇವೆ ಮಾಡುವ ಭಾಗ್ಯ ನನ್ನದಾಗಿದೆ ಎಂದು ಹೆಬ್ಬಾಳಕರ್ ಹೇಳಿದರು.
ಮಹಿಳೆಯರು ಈ ಮೊದಲು ಸಣ್ಣ ಪುಟ್ಟದ್ದಕ್ಕೂ ಮಾವನ ಮುಂದೆ, ಗಂಡನ ಮುಂದೆ ಕೈ ಚಾಚುವ ಪರಿಸ್ಥಿತಿ ಇತ್ತು. ಸಿದ್ದರಾಮಯ್ಯ ಸರಕಾರ ಬಂದ ನಂತರ ಮಹಿಳೆಯರಿಗೆ ಯಜಮಾನಿ ಎಂದು ಕರೆದರು, ಪಂಚ ಗ್ಯಾರಂಟಿ ಮೂಲಕ ಶಕ್ತಿ ತುಂಬಿದರು. ಇಂತಹ ಪುಣ್ಯದ ಕೆಲಸ ಮಾಡುವ ಅವಕಾಶ ನಮಗೆ ಸಿಕ್ಕಿತು ಎಂದ ಹೆಬ್ಬಾಳಕರ್, ಅಂಗನವಾಡಿ ಕಾರ್ಯಕರ್ತೆಯರ ಕೆಲಸವನ್ನು ನಾನು ಪೂಜಿಸುತ್ತೇನೆ. ಯಾರದ್ದೋ ಮಕ್ಕಳ ಪಾಲನೆ, ಪೋಷಣೆ ಮಾಡುವ ನಿಮ್ಮ ಸೇವೆಗೆ ಬೆಲ ಕಟ್ಟಲು ಸಾಧ್ಯವಿಲ್ಲ ಎಂದು ಪ್ರಶಂಸಿಸಿದರು.
ಈ ಮೊದಲು ಎಲ್ಲ ಕೆಲಸಗಳಿಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಬಳಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಗೃಹ ಲಕ್ಷ್ಮೀ ಯೋಜನೆ ಮೂಲಕ ಜಿಲ್ಲಾಧಿಕಾರಿಗಳಿಂದ ಹಿಡಿದ ಎಲ್ಲ ಅದಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆಲಸವನ್ನು ಮಾಡಿದರು. ಈ ಮೂಲಕ ಎಂತಹ ಬದಲಾವಣೆಯಾಯಿತು ಎನ್ನುವುದನ್ನು ನೀವೆಲ್ಲ ನೋಡಿದ್ದೀರಿ ಎಂದು ಹೆಬ್ಬಾಳಕರ್ ಹೇಳಿದರು.
ಗೌರವಧನ ಹೆಚ್ಚಿಸುವ ಕೆಲಸ ಬಿಡುವುದಿಲ್ಲ
ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗೌರವಧನ ಹೆಚ್ಚಿಸುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮೊದಲು ಭರವಸೆ ನೀಡಿದೆ. ಇದು ನಮ್ಮ 6ನೇ ಗ್ಯಾರಂಟಿ. ಕೊಟ್ಟ ಭಾಷೆಯನ್ನು ಈಡೇರಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾಡುತ್ತಾರೆ. ನಾನೂ ಬೆನ್ನು ಬಿದ್ದು ಮಾಡಿಸುತ್ತೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ಕುಡಿಕೆಗೆ ನವಧಾನ್ಯಗಳನ್ನು ಸುರಿಯುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ಸಚಿವರು ಗರ್ಭಿಣಿಯರ ಸೀಮಂತ ಕಾರ್ಯಕ್ರಮ, ಮಕ್ಕಳಿಗೆ ಅನ್ನಪ್ರಾಶನ, ದತ್ತು ಸ್ವೀಕಾರ ಕೇಂದ್ರ ಉದ್ಘಾಟನೆ, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ಉದ್ಘಾಟನೆ, ಮಕ್ಕಳ ಸಹಾಯವಾಣಿ ಉದ್ಘಾಟನೆಯನ್ನು ನೆರವೇರಿಸಿದರು.
ಸಚಿವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಮಂಗಳಮುಖಿಯರು ಆರತಿ ಮಾಡಿ, ದೃಷ್ಟಿ ತೆಗೆದು ಸ್ವಾಗತಿಸಿದರು. ಪುಷ್ಪವೃಷ್ಠಿ, ಪೂರ್ಣಕುಂಬ ಸ್ವಾಗತದೊಂದಿಗೆ ವೇದಿಕೆಗೆ ಕರೆದೊಯ್ಯಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜ ಆರ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುನಿತಾ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.