⭕️ಯಕ್ಷಗಾನ ಕಲೆ ಉಳಿವು ಬೆಳವಣಿಗೆಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸದಾ ಪ್ರೋತ್ಸಾಹ : ಡಾ. ತಲ್ಲೂರು
ಉಡುಪಿ : ಸೆಪ್ಟೆಂಬರ್ 26: ದೃಶ್ಯ ನ್ಯೂಸ್ : ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ, ಕರ್ನಾಟಕ ಜಾನಪವ ಪರಿಷದ್ ಬೆಂಗಳೂರು ಉಡುಪಿ ಜಿಲ್ಲೆ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರ ಸಹಕಾರದಲ್ಲಿ 4ನೇ ವರ್ಷದ `ಯಕ್ಷ ಪಂಚಮಿ ‘ ಕಾರ್ಯಕ್ರಮದ ಉದ್ಘಾಟನೆ ಸೋಮವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಯಕ್ರಮದ ರೂವಾರಿ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕರೂ ಆಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಉಡುಪಿ ಶ್ರೀಕೃಷ್ಣನ ಸಾನಿಧ್ಯದಲ್ಲಿ ನಡೆಸುವ ಯಕ್ಷಗಾನ, ನರ್ತನ ಮೊದಲಾದ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರೆ ಕಲೆ ಅಕ್ಷಯವಾಗುತ್ತದೆ. ಯಕ್ಷಗಾನದಂತಹ ಭಗವತ್ ಕಲೆಯನ್ನು ಉಳಿಸಿ ಬೆಳೆಸಬೇಕು ಎನ್ನುವ ಏಕೈಕ ಉದ್ದೇಶದಿಂದ ಯಕ್ಷ ಪಂಚಮಿ, ಶ್ರೀಧಾರೇಶ್ವರ ಅಷ್ಟಾಹ ಮೊದಲಾದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಇಲ್ಲಿ ಯಕ್ಷಗಾನ ಕಲೆಯ ಪ್ರದರ್ಶನ ಮಾತ್ರವಲ್ಲದೆ ಸಾಧಕ ಯಕ್ಷ ಕಲಾವಿದರನ್ನು ಕೂಡಾ ಗುರುತಿಸಿ ಅವರಿಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ವತಿಯಿಂದ `ಯಕ್ಷ ಪ್ರಶಸ್ತಿ ‘ಯನ್ನು ನೀಡಿ ಗೌರವಿಸಲಾಗುತ್ತಿರುವುದು ಅತೀವ ಸಂತೋಷ ತಂದಿದೆ ಎಂದರು.
ಯಕ್ಷಗಾನ ಕಲೆಯ ಬೆಳವಣಿಗೆಗೆ ಅವಿರತ ಶ್ರಮಿಸುತ್ತಿರುವ ವಕ್ವಾಡಿ ರಂಜಿತ್ ಶೆಟ್ಟಿ ಯವರಂತಹ ಕಲಾರಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಈ ರಂಗಕ್ಕೆ ಬರಬೇಕು. ಕಲೆಯ ಉಳಿವಿಗೆ ಹೇಗೆ ಕಲಾವಿದ, ಪ್ರೇಕ್ಷಕನೂ ಕಾರಣನಾಗುತ್ತಾನೋ ಹಾಗೆಯೇ ಕಲಾರಾಧಕರ ಕೊಡುಗೆ ಕೂಡಾ ಅಷ್ಟೇ ಅಗತ್ಯವಿದೆ. ಯಾವುದೇ ಸ್ವಾರ್ಥವಿಲ್ಲದೆ, ಕೇವಲ ಕಲೆಯ ಉಳಿವಿಗೆ ಚಿಂತನೆ ನಡೆಸುವ ಇಂತಹ ಕಲಾಪ್ರೇಮಿಗಳನ್ನು ಟ್ರಸ್ಟ್, ಜಾನಪದ ಪರಿಷತ್ತು ತುಂಬು ಹೃದಯದ ಪ್ರೋತ್ಸಾಹ ನೀಡಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠದ ದಿವಾನರಾದ ವರದರಾಜ ಭಟ್ ಉದ್ಘಾಟಿಸಿ, ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಮೆಕ್ಕೆಕಟ್ಟು ಇಲ್ಲಿನ ಆಡಳಿತ ಮೊಕ್ತೇಸರ ಕಿಶನ್ ಹೆಗ್ಡೆ ಕೊಳ್ಕೆಬೈಲು, ರಂಗಸ್ಥಳ ಮಂಗಳೂರು ಅಧ್ಯಕ್ಷ ದಿನೇಶ್ ವಿ.ಪೈ, ಶ್ರೀ ಹಟ್ಟಿಯಂಗಡಿ ಮೇಳದ ಸಂಚಾಲಕ ವಕ್ವಾಡಿ ರಂಜಿತ್ ಶೆಟ್ಟಿ, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.
*ಐದು ದಿನ ಯಕ್ಷ ಪಂಚಮಿ* ಪ್ರಸ್ತುತ ಈ ಯಕ್ಷ ಪಂಚಮಿ ಕಾರ್ಯಕ್ರಮ ಸೆ.25ರಿಂದ ಸೆ.29ರ ವರೆಗೆ ನಡೆಯಲಿದ್ದು, ಸೆ.26ರಂದು ಹರಿದರ್ಶನ, ಸೆ.27ರಂದು ವಾಲಿಮೋಕ್ಷ, ಸೆ.28ರಂದು ಶ್ರೀಕೃಷ್ಣ ಪಾರಿಜಾತ ಹಾಗೂ ಸೆ.29ರಂದು ಶ್ರೀನಿವಾಸ ಕಲ್ಯಾಣ ಪ್ರಸಂಗ ಪ್ರಸ್ತುತಗೊಳ್ಳಲಿದೆ. ಸೆ.29ರಂದು ನಡೆಯುವ ಸಮಾರೋಪದಲ್ಲಿ ಸಂಜೆ 7 ಗಂಟೆಗೆ ನಡೆಯುವ ಸಮಾರೋಪದಲ್ಲಿ ಬಣ್ಣದ ವೇಷಧಾರಿ ಶಂಕರ ಮರಕಲ ಅವರಿಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ‘ಯಕ್ಷ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.