ಉಡುಪಿ : ಸೆಪ್ಟೆಂಬರ್ 26: ದೃಶ್ಯ ನ್ಯೂಸ್ : ಸಾರಾಯಿ ಕುಡಿದು ಗಾಂಜಾ ಮತ್ತಿನಲ್ಲಿ ಮನೆ ಎದುರುಗಡೆ ನಿಂತಿದ್ದ ಅಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ ಘಟನೆ ಉಡುಪಿಯ ನಿಟ್ಟೂರು ಹನುಮಂತ ನಗರದಲ್ಲಿ ನಡೆದಿದೆ.
ಖಲೀಮ್ (35) ಎಂಬಾತನೇ ನೆರೆಮನೆಯ ರಿಕ್ಷಾಕ್ಕೆ ಬೆಂಕಿ ಹಚ್ಚಿ ಹುಚ್ಚಾಟ ನಡೆಸಿದ ಭೂಪ. ಇದೀಗ ಉಡುಪಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಹನುಮಂತ ನಗರದ ದಿವಾಕರ ಎನ್ನುವವರಿಗೆ ಸೇರಿದ ಅಟೋ ರಿಕ್ಷಾ ಬೆಂಕಿಯ ಕೆನ್ನಾಲೆಗೆ ಸುಟ್ಟು ಕರಕಲಾಗಿದೆ. ಖಲೀಮ್ ಎಂಬಾತ ಮಲ್ಪೆಯ ಮೀನುಗಾರಿಕೆ ದಕ್ಕೆಯಲ್ಲಿ ಕೆಲಸ ಮಾಡಿಕೊಂಡಿದ್ದು ಸೋಮವಾರ ತಡ ರಾತ್ರಿ ಸಾರಾಯಿ ಕುಡಿದು ಹಾಗೂ ಗಾಂಜಾ ಮತ್ತಲ್ಲಿ ಪಕ್ಕದ ಮನೆಯ ಮೇಲೆ ಕಲ್ಲು ಎಸೆದು ಧಾಂಧಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ದಿವಾಕರ ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಅತನಿಗೆ ವಾರ್ನಿಂಗ್ ನೀಡಿ ತೆರಳಿದ್ದರು.
ಪೊಲೀಸರು ತೆರಳಿದ ಬಳಿಕ ದಿವಾಕರ್ ಪೊಲೀಸರಿಂದ ಅವಮಾನವಾಗಿದೆ ಎಂದು ಅಕ್ರೋಶಗೊಂಡು, ಮನೆ ಎದುರು ನಿಂತಿದ್ದ ರಿಕ್ಷಾಕ್ಕೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಸಂಧರ್ಭದಲ್ಲಿ ಮಲಗಿದ್ದ ದಿವಾಕರ್ ಕುಟುಂಬದವರು ಮನೆಯಿಂದ ಹೊರಬಂದು ನೀರು ಚೆಲ್ಲಿ ಬೆಂಕಿ ನಂದಿಸುವುದರೊಳಗೆ ರಿಕ್ಷಾ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ತಕ್ಷಣ ಉಡುಪಿ ನಗರ ಠಾಣೆ ಪೊಲೀಸರು ಖಲೀಮ್ ನನ್ನು ವಶಕ್ಕೆ ಪಡೆದು ಅತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.