ಉಡುಪಿ: ದೃಶ್ಯ ನ್ಯೂಸ್ : ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಬರುತ್ತಿದ್ದು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ, ಮಹಿಳಾ ಕಾಂಗ್ರೆಸ್ ಸಮಿತಿ ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರುಗಳ ಸಭೆಯಲ್ಲಿ ಸಚಿವರು ಮಾತನಾಡಿದರು.
ನಾಲ್ಕು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷ ಇಡೀ ರಾಜ್ಯದಲ್ಲಿ ಜಯಭೇರಿ ಬಾರಿಸಿದರೂ ಉಡುಪಿ ಜಿಲ್ಲೆಯಲ್ಲಿ ನೆಲಕಚ್ಚಿತು. ಪಕ್ಷದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ಮುಂದಿನ ದಿನಗಳಲ್ಲಿ ಸಮರ್ಥವಾಗಿ ಪಕ್ಷವನ್ನು ಕಟ್ಟೋಣ ಎಂದರು. ಉಡುಪಿ ಜಿಲ್ಲೆಯಲ್ಲಿ ಶೇಕಡಾ 95% ಮಂದಿ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಮಹಿಳೆಯರು ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಿ ಇದರ ಲಾಭ ಸರ್ಕಾರಕ್ಕೆ ಸಿಗುವಂತೆ ಮಾಡಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಇನ್ಮುಂದೆ ತಿಂಗಳಲ್ಲಿ ನಾಲ್ಕು ದಿನ ಉಡುಪಿಯಲ್ಲಿ ವಾಸ್ತವ್ಯ ಹೂಡಲಿದ್ದು, ಜಿಲ್ಲೆಯ ಅಭಿವೃದ್ಧಿ ಕಡೆ ಗಮನಹರಿಸುವುದರ ಜೊತೆಗೆ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಪಕ್ಷ ನೆಲಕಚ್ಚಿರಬಹುದು, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ಜಿಲ್ಲೆಯಲ್ಲಿ ಸಂಘಟಿಸಬೇಕು ಎಂದು ಸಚಿವರು ಹೇಳಿದರು. ಸಭೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಮಿಥುನ್ ರೈ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.