ಕುಂದಾಪುರ: ಸೆಪ್ಟೆಂಬರ್ 23: ದೃಶ್ಯ ನ್ಯೂಸ್ : ಡಾ. ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರದ್ದು ಆದರ್ಶ ವ್ಯಕ್ತಿತ್ವ, ಕಷ್ಟಗಳನ್ನೆ ಗೆಲುವಿನ ಮೆಟ್ಟಿಲಾಗಿಸಿಕೊಂಡು ಯಶಸ್ವಿ ಉದ್ಯಮಿಯಾಗಿ ನಮ್ಮ ಮುಂದೆ ನಿಂತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಹಾಲಾಡಿಯ ಶ್ರೀಮತಿ ಶಾಲಿನಿ ಜಿ.ಶಂಕರ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ‘ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರ ಹುಟ್ಟೂರ ಸನ್ಮಾನ’ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು ಈ ಸನ್ಮಾನ ಅವರಿಗೆ ಸಿಕ್ಕ ಗೌರವ, ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ನೆರವು ನೀಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟರು, ದಾನ, ಧರ್ಮಕ್ಕೆ ಎತ್ತಿದ ಕೈ ಎನಿಸಿಕೊಂಡವರು ಎಂದು ಸ್ಮರಿಸಿದರು.
ಶ್ರೀನಿವಾಸ ಶೆಟ್ಟರಂಥ ವ್ಯಕ್ತಿಗಳು ದಾನಧರ್ಮ ಮಾಡುವುದ್ದಕ್ಕೆ ಹುಟ್ಟಿದ್ದಾರೆ ಎನಿಸುತ್ತದೆ. ಹಣ ಇದ್ದ ಮಾತ್ರಕ್ಕೆ ಎಲ್ಲರಿಗೂ ಸಹಾಯ ಮಾಡೋ ಗುಣ ಇರುವುದಿಲ್ಲ. ಆದರೆ, ಶ್ರೀನಿವಾಸ ಶೆಟ್ಟರು ಮಾತ್ರ ವಿಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ ಎಂದರು.
ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರೀತಿ ವಿಶ್ವಾಸ ಮುಖ್ಯ, ಇದಷ್ಟು ದಿನ ಪ್ರೀತಿ ವಿಶ್ವಾಸದ ಜೊತೆಗೆ ಇತರರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ‘ಡಾಕ್ಟರ್ ಆಫ್ ಸೈನ್ಸ್’ ಗೌರವಕ್ಕೆ ಡಾ.ಶ್ರೀನಿವಾಸ ಶೆಟ್ಟಿ ಭಾಜನರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಹುಟ್ಟೂರಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ನ ಮಾಜಿ ಸಭಾಪತಿಗಳಾದ ಕೆ.ಪ್ರತಾಪಚಂದ್ರ ಶೆಟ್ಟಿ, ವಿಸ್ತಾರ ನ್ಯೂಸ್ ಚಾನೆಲ್ನ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆ ಮನೆ, ಉದ್ಯಮಿ ಎಂ.ದಿನೇಶ್ ಹೆಗ್ಡೆ ಮೊಳಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.