ಬೆಂಗಳೂರು: ದೃಶ್ಯ ನ್ಯೂಸ್ : ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ (ಟಿ. ನಾರಾಯಣಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಗುರುವಾರ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಗಾಂಧಿನಗರದಿಂದ ವಿಧಾನಸೌಧದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಗಾಂಧಿನಗರದಲ್ಲಿರುವ ಕರವೇ ಕಚೇರಿಯಿಂದ ವಿಧಾನಸೌಧದತ್ತ ಮೆರವಣಿಗೆಯಲ್ಲಿ ಹೊರಟಿದ್ದ ಕಾರ್ಯಕರ್ತರನ್ನು ಗಾಂಧಿ ಪ್ರತಿಮೆ ವೃತ್ತದಲ್ಲೇ ಪೊಲೀಸರು ತಡೆದು ನಿಲ್ಲಿಸಿದರು. ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದೆ. ಪ್ರತಿಭಟನೆಗೂ ಅವಕಾಶವಿಲ್ಲ. ಹೀಗಾಗಿ, ಮೆರವಣಿಗೆ ಕೈ ಬಿಟ್ಟು ವಾಪಸು ಹೋಗಿ ಎಂದು ಪೊಲೀಸರು ಎಚ್ಚರಿಸಿದರು.
ಅದಕ್ಕೆ ಒಪ್ಪದ ಕಾರ್ಯಕರ್ತರು, ಸ್ಥಳದಲ್ಲಿ ಸಾರ್ವಜನಿಕರ ವಾಹನಗಳ ಸಂಚಾರ ತಡೆದು ಪ್ರತಿಭಟನೆಗೆ ಮುಂದಾದರು. ಬ್ಯಾರಿಕೇಡ್ ಹಾಗೂ ಪೊಲೀಸರನ್ನು ತಳ್ಳಿ ಮುಂದಕ್ಕೆ ಹೋಗಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ನೂಕುನುಗ್ಗಲು ಉಂಟಾಯಿತು.
ಇದೇ ಸಂದರ್ಭದಲ್ಲಿ ಪೊಲೀಸರು, ಟಿ. ನಾರಾಯಣಗೌಡ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಎಲ್ಲರನ್ನೂ ಬಿಎಂಟಿಸಿ ಬಸ್‌ಗಳಲ್ಲಿ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಮೈದಾನಕ್ಕೆ ಕರೆದೊಯ್ದರು. ಕೆಲ ಗಂಟೆಗಳ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಿದರು.
ಕರ್ನಾಟಕ ಮತ್ತು ಕಾವೇರಿ ಕಣಿವೆ ಪ್ರದೇಶದಲ್ಲಿ ತೀವ್ರ ಬರಗಾಲವಿದೆ. ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ, ಜನರಿಗೆ ಸಂಕಷ್ಟ ಎದುರಾಗಲಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ಜನರ ಆಗ್ರಹವನ್ನು ಧಿಕ್ಕರಿಸಿ ನೀರು ಹರಿಸಿದರೆ, ಗಂಭೀರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಕಾರ್ಯಕರ್ತರು ಎಚ್ಚರಿಸಿದರು.