ಬೆಂಗಳೂರು: ಸೆಪ್ಟೆಂಬರ್ 22: ದೃಶ್ಯ ನ್ಯೂಸ್ : ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ 5 ಕೋಟಿ ಪಡೆದು ವಂಚಿಸಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಬಂಧಿತ ಆರೋಪಿಗಳಿಂದ ₹ 2.76 ಕೋಟಿ ಜಪ್ತಿ ಮಾಡಿದ್ದಾರೆ.
ಪ್ರಕರಣದ ಬಗ್ಗೆ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಪೊಲೀಸ್ ಕಮಿಷನರ್ ಬಿ. ದಯಾನಂದ್, ಆರೋಪಿ ಚೈತ್ರಾ ಕುಂದಾಪುರ ಹಾಗೂ ಇತರರಿಂದ 2 ಕೋಟಿ ರೂ. (ನಗದು, ಕಾರು, ಬ್ಯಾಂಕ್ ಠೇವಣಿ, ಚಿನ್ನಾಭರಣ) ಜಪ್ತಿ ಮಾಡಲಾಗಿದೆ ಎಂದರು.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದಲ್ಲಿದ್ದ ಅಭಿನವ ಹಾಲವೀರಪ್ಪ ಸ್ವಾಮೀಜಿಗೆ ಸೇರಿದ್ದ 56 ಲಕ್ಷ ರೂ. ಹಾಗೂ ಸ್ವಾಮೀಜಿಯ ಪರಿಚಯಸ್ಥರೊಬ್ಬರ ಬಳಿಯಿದ್ದ ರೂ. 20 ಲಕ್ಷವನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಉದ್ಯಮಿ ಗೋವಿಂದ ಬಾಬು ಪೂಜಾರಿ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಈಗಾಗಲೇ ಎಂಟು ಮಂದಿಯನ್ನು ಬಂಧಿಸಿದ್ದಾರೆ. 5 ಕೋಟಿ ರೂ. ಪೈಕಿ 2.76 ಕೋಟಿ ರೂ. ಜಪ್ತಿ ಮಾಡಿದ್ದಾರೆ. ಉಳಿದ ಹಣ ಎಲ್ಲಿದೆ? ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ.
ಸ್ವಾಮೀಜಿಯಿಂದ ಹಣ ಪಡೆದಿದ್ದ ಪ್ರಣವ್ ಪ್ರಸಾದ್, ತಿಪ್ಪೇಸ್ವಾಮಿ ಹಾಗೂ ಇತರೆ ಮೂವರಿಗೆ ವಿಚಾರಣೆಗಾಗಿ ನೋಟಿಸ್ ನೀಡಲಾಗಿತ್ತು. ಅವರೆಲ್ಲರೂ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ ಎಂದರು.
ಚೈತ್ರಾ ವಿಚಾರಣೆ ಮುಕ್ತಾಯ: ಆರೋಪಿ ಚೈತ್ರಾ ಕುಂದಾಪುರ ವಿಚಾರಣೆ ಹಾಗೂ ಮಹಜರು ಮುಕ್ತಾಯವಾಗಿದೆ. ಅವರ ಹೇಳಿಕೆ ಆಧರಿಸಿ ಹಲವು ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಚೈತ್ರಾ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.