ಬೆಂಗಳೂರು: ಸೆಪ್ಟೆಂಬರ್ 21: ದೃಶ್ಯ ನ್ಯೂಸ್ : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚಿಸಿದ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್‌ಪಿ) ಜಾರಿ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿದೆ.
ಚೈತ್ರಾ ಕುಂದಾಪುರ ಹಾಗೂ ಇತರೆ ಆರೋಪಿಗಳು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಯಿಂದ 5 ಕೋಟಿ ರೂ. ಪಡೆದು ವಂಚನೆ ಮಾಡಿದ್ದು ಅಷ್ಟೊಂದು ದೊಡ್ಡ ಮೊತ್ತ ಅಕ್ರಮವಾಗಿ ವರ್ಗಾವಣೆಯಾಗಿದೆ. ಆ ಹಣದಲ್ಲಿ ಆರೋಪಿಗಳು ಅಕ್ರಮ ಆಸ್ತಿ ಮಾಡಿಕೊಂಡಿದ್ದಾರೆ. ಹಾಗಾಗಿ, ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಬೇಕು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್ ಅವರು ಜಾರಿ ನಿರ್ದೇಶನಾಲಯದ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯ ಸೇರಿದಂತೆ ಸೂಕ್ತ ತನಿಖಾ ಸಂಸ್ಥೆಗೆ ಪ್ರಕರಣ ವಹಿಸದಿದ್ದರೆ ದೊಡ್ಡವರು ತಪ್ಪಿಸಿಕೊಳ್ಳುತ್ತಾರೆ ಎಂದು ಮನವಿ ಪತ್ರದಲ್ಲಿ ಹೇಳಿದ್ದಾರೆ.
ಬಿಜೆಪಿ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವ ಪಾಲಿಸದೆ, ಸ್ಪರ್ಧಾಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕ ರೀತಿಯಲ್ಲಿ ನಡೆಸದೆ ಇರುವುದು ಇಂತಹ ಅವ್ಯವಹಾರಗಳಿಗೆ ದಾರಿಯಾಗಿದೆ. ಚೈತ್ರಾ ಕುಂದಾಪುರ ಮಾತ್ರವಲ್ಲದೆ, ಬಿಜೆಪಿ ಸೇರಿದಂತೆ ಇತರ ಪಕ್ಷಗಳಲ್ಲೂ ಇದೇ ರೀತಿಯ ಅವ್ಯವಹಾರಗಳು ನಡೆಯುತ್ತಿವೆ. ಈ ಬಗ್ಗೆ ಎಲ್ಲ ಪಕ್ಷಗಳೂ ಗಂಭೀರವಾಗಿ ಚಿಂತಿಸಬೇಕು ಎಂದು ಸಲಹೆ ನೀಡಿದ್ದಾರೆ.