ಉಡುಪಿ ಸೆ.18: ದೃಶ್ಯ ನ್ಯೂಸ್ : ನಗರದಲ್ಲಿ ಬೆಳ್ಳಂಬೆಳಗ್ಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಮಹಿಳೆಯರ ಚಿನ್ನದ ಸರ ಕಸಿದುಕೊಂಡು ಪರಾರಿಯಾದ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ನಗರದ ರಾಜಾರಾಮ್ ಮೋಹನ್ ರಾಯ್ ರಸ್ತೆಯ ನಿವಾಸಿ ಎಪ್ಪತ್ತು ವರ್ಷದ ಗೀತಾ ಅವರು ಮುಂಜಾನೆ 5.30ಕ್ಕೆ ಶ್ರೀ ಕೃಷ್ಣ ಮಠಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವೃದ್ದೆಯ ಮೂರು ಪವನ್ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿದ್ದರು.
ಇದೇ ದುಷ್ಕರ್ಮಿಗಳಿಬ್ಬರು ಕರಾವಳಿ ಬೈಪಾಸ್ ಬಳಿಯಿಂದ ತನ್ನ ತಾಯಿ ಮನೆಗೆ ಕದಿರು ಕಟ್ಟುವುದಕ್ಕೆ ತೆರಳುತ್ತಿದ್ದ ಕುತ್ಪಾಡಿ ನಿವಾಸಿ ಮಮತ (38) ಅವರ ಕುತ್ತಿಗೆಯಲ್ಲಿದ್ದ ಮೂರು ಲಕ್ಷ ಮೌಲ್ಯದ ಕರಿಮಣಿ
ಸರ ಕಸಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಕಳ್ಳರ ಪತ್ತೆಗೆ ಪೊಲೀಸರು ಸಿಸಿಟಿವಿ ಮೊರೆ ಹೋಗಿದ್ದಾರೆ.
ಬೈಕ್ ನಲ್ಲಿ ಬಂದಿದ್ದ ವ್ಯಕ್ತಿಗಳು ಸುಮಾರು 35ವರ್ಷದ ಆಸುಪಾಸಿನವರು ಎಂದು ಮಹಿಳೆಯರು ತಿಳಿಸಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕರಾವಳಿ ಬೈಪಾಸ್ ಬಳಿ ಪೊಲೀಸ್ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಚಹರೆ ದಾಖಲಾಗಿದ್ದು, ಚಹರೆ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ.
ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.