ಮಣಿಪಾಲ, 17, ಸೆಪ್ಟೆಂಬರ್ 2023:ಮಾಹೆ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಂದು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಮುಖ್ಯಸ್ಥರಾದ ಡಾ ರಂಜನ್ ಆರ್ ಪೈ ಅವರು ಬೋನ್ ಬ್ಯಾಂಕ್ (ಮೂಳೆ ನಿಧಿ) ಅನ್ನು ಉದ್ಘಾಟಿಸಿದರು.
ಇದು ಮಣಿಪಾಲ್ ಫೌಂಡೇಶನ್ನ ಕೊಡುಗೆಯಾಗಿದೆ. ಮಣಿಪಾಲ ಫೌಂಡೇಶನ್ನ ಸಿಇಒ ಶ್ರೀ ಹರಿನಾರಾಯಣ ಶರ್ಮಾ, ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಮತ್ತು ಸಹ ಉಪಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕುಮಾರ್ ರಾವ್- ಅವರು ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದರು. ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.
ಬೋನ್ ಬ್ಯಾಂಕ್ ಉದ್ಘಾಟಿಸಿದ ಡಾ ರಂಜನ್ ಪೈ ಅವರು ಕೆ ಎಂ ಸಿ ಕಾಲೇಜು ಮತ್ತು ಆಸ್ಪತ್ರೆಗೆ ಅಭಿನಂದನೆ ಸಲ್ಲಿಸಿದರು ಮತ್ತು ಯಶಸ್ಸನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಹರಿನಾರಾಯಣ ಶರ್ಮಾ , “ಮಣಿಪಾಲ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಬೋನ್ ಬ್ಯಾಂಕ್ ಪ್ರಥಮವಾಗಿದ್ದು, ಈ ಮೂಲಕ ಉತ್ತರ ಕರಾವಳಿ ಕರ್ನಾಟಕದಲ್ಲಿ ರೋಗಿಗಳಿಗೆ ಉಪಯುಕ್ತವಾಗಲಿದೆ” ಎಂದರು “.
ಡಾ. ಎಂ ಡಿ ವೆಂಕಟೇಶ್ ಅವರು ಮಾತನಾಡುತ್ತಾ ,” ದಾನಿಯ ಮೂಳೆಯ ಸಂಸ್ಕರಣೆ/ಕ್ಷ ಕಿರಣ -ಸೋಂಕು ನಿವಾರಕ ಪ್ರಕ್ರಿಯೆ ವೆಚ್ಚದ ಹೊರತಾಗಿಯೂ ವಾಣಿಜ್ಯಿಕವಾಗಿ ಲಭ್ಯವಿರುವ ಪರ್ಯಾಯಗಳಿಗಿಂತ ಬೋನ್ ಬ್ಯಾಂಕ್ ಅಲೋಗ್ರಾಫ್ಟ್ ಅಗ್ಗವಾಗಿರುತ್ತದೆ ಮತ್ತು ಉತ್ತಮ ಗುಣಮಟ್ಟದ್ದಾಗಿರುತ್ತದೆ ‘ ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣದಲ್ಲಿ ಡಾ ಎಚ್ ಎಸ್ ಬಲ್ಲಾಳ್ ಅವರು, “ಹೊಸ ಸೌಲಭ್ಯಗಳು ಮತ್ತು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವಲ್ಲಿ ಮಣಿಪಾಲ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ ಎಂದು ಹೇಳಿ, ಇಂದಿನ ದಿನಗಳಲ್ಲಿ ಬೋನ್ ಬ್ಯಾಂಕ್ನ ಅವಶ್ಯಕತೆ ಮತ್ತು ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದರು”.
ಮಣಿಪಾಲದಲ್ಲಿ ಬೋನ್ ಬ್ಯಾಂಕ್ ಆರಂಭಿಸಲು ಶ್ರಮಿಸಿದ ಎಲ್ಲರಿಗೂ ಡಾ.ಶರತ್ ಕೆ.ರಾವ್ ಅಭಿನಂದನೆ ಸಲ್ಲಿಸಿ, ‘ಇದರ ಮೂಲಕ ದೊಡ್ಡ ದೊಡ್ಡ ನಗರದಲ್ಲಿ ದೊರಕುವಂತಹ ಸೌಲಭ್ಯ ಈಗ ಮಣಿಪಾಲದಲ್ಲಿ ಸಿಗುವಂತಾಗಿದೆ” ಎಂದರು.
ಬೋನ್ ಬ್ಯಾಂಕ್ (ಮೂಳೆ ನಿಧಿ) ಕುರಿತು ವಿವರವಾದ ಅವಲೋಕನ ನೀಡಿದ ಮೂಳೆ ಮತ್ತು ಕೀಲು ವಿಭಾಗದ ಪ್ರಾಧ್ಯಾಪಕ ಹಾಗೂ ಬೋನ್ ಬ್ಯಾಂಕ್ ಇದರ ಸಂಚಾಲಕ ಡಾ. ಮೋನಪ್ಪ ನಾಯ್ಕ್ ಆರೂರು ಅವರು, “ ಮೂಳೆಯ ಕ್ಯಾನ್ಸರ್ ಗೆಡ್ಡೆಯ ಛೇದನದಲ್ಲಿ ಉಂಟಾಗುವ ದೊಡ್ಡ ಪ್ರಮಾಣದ ಮೂಳೆ ನಷ್ಟತೆಯನ್ನು ನಿರ್ವಹಿಸುವಲ್ಲಿ (ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ದೊಡ್ಡ ಪ್ರಮಾಣದ ಮೂಳೆ ನಷ್ಟತೆಯನ್ನು ಮರುನಿರ್ಮಾಣ ಮಾಡಲು ಆಟೋಗ್ರಾಫ್ಟ್ಗಗಳಿಂದ ಅಸಾಧ್ಯ ), ಮುರಿದ ಮೂಳೆಗಳಲ್ಲಿ ಮೂಳೆ ನಷ್ಟ ಉಂಟಾಗಿ ಕೂಡದಿರುವ ಸಂದರ್ಭದಲ್ಲಿ , ಕೀಲು ಪುನರ್ನಿರ್ಮಾಣ ಶಸ್ತ್ರ ಚಿಕಿತ್ಸೆಯಲ್ಲಿ (ಆರ್ಥ್ರೋಪ್ಲಾಸ್ಟಿ ) ಕಂಡುಬರುವ ಮೂಳೆ ನಷ್ಟತೆಗೆ ಮೂಳೆ ಕಸಿಗಳ ಅಗತ್ಯವಿರುತ್ತದೆ . ಈ ಪರಿಸ್ಥಿತಿಗಳಲ್ಲಿ ಅಲೋಗ್ರಾಫ್ಟ್ಗಳು ತುಂಬಾ ಉಪಯುಕ್ತವಾಗುತ್ತದೆ . ಅಲೋಗ್ರಾಫ್ಟ್ಗಳು ಒಂದೇ ಪ್ರಭೇದದ , ತಳೀಯವಾಗಿ ಒಂದೇ ಅಲ್ಲದ ಸದಸ್ಯರೊಳಗಿನ (ಮನುಷ್ಯನಿಂದ ಮನುಷ್ಯನಿಗೆ) ಅಂಗಾಂಶ ಕಸಿಗಳನ್ನು ರೂಪಿಸುತ್ತದೆ. ಜಾಯಿಂಟ್ ರಿಪ್ಲೇಸ್ಮೆಂಟ್ (ಆರ್ಥ್ರೋಪ್ಲಾಸ್ಟಿ) ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳಲ್ಲಿ ಹೊರತೆಗೆಯುವ , ಹಾನಿಗೊಳಗಾದ ಎಲುಬಿನ ತುಂಡುಗಳು ಮತ್ತು ಆಯ್ದ ಅಂಗಛೇದನ ಶಸ್ತ್ರ ಚಿಕಿತ್ಸೆಯಲ್ಲಿ (ಅಂಪ್ಯೂಟೇಷನ್) ತೆಗೆದ ಅಂಗದ ಭಾಗದಲ್ಲಿರುವ ಮೂಳೆಗಳು ಹಾಗೂ ಆರೋಗ್ಯಕರ ಸ್ವಯಂ ಪ್ರೇರಿತ ದಾನಿಗಳಿಂದ ಬೋನ್ ಬ್ಯಾಂಕ್ ಗೆ ಬೇಕಾಗುವ ಮೂಳೆಯ ಮೂಲವಾಗಿರುತ್ತದೆ. ಈ ತರಹದ ಎಲುಬುಗಳನ್ನು ಜೈವಿಕ ತ್ಯಾಜ್ಯ ಎಂದು ತಿರಸ್ಕರಿಸುವ ಬದಲಾಗಿ ಬೋನ್ ಬ್ಯಾಂಕ್ ನಲ್ಲಿ ಸಂಸ್ಕರಣೆಯ ಪ್ರಕ್ರಿಯೆಗೆ ಒಳಪಡಿಸಿ (ರಕ್ತ, ಕೊಬ್ಬು, ಮಾಲಿನ್ಯ ಮತ್ತು ಸೂಕ್ಷ್ಮ ಜೀವಿಗಳಿಂದ ಮುಕ್ತಗೊಳಿಸಿ ) ಸುರಕ್ಷಿತವಾಗಿ ಮತ್ತು ಸೋಂಕು ಮುಕ್ತವಾಗಿ ತಯಾರಿಸಿದ್ದಲ್ಲಿ (ಅಪ್ಸೈಕ್ಲಿಂಗ್) ಇತರೇ ವ್ಯಕ್ತಿಗಳ ಚಿಕಿತ್ಸೋಪಚಾರಗಳಿಗೆ ಉಪಯೋಗವಾಗುತ್ತದೆ. ಬೋನ್ ಬ್ಯಾಂಕ್ ನಲ್ಲಿ ದಸ್ತಾವೇಜು ಮತ್ತು ಡೀಪ್ ಫ್ರೀಜರ್ ಕೊಠಡಿ, ಸಂಗ್ರಹಣೆ/ವಿತರಣಾ ಕೊಠಡಿ ಹೊರತುಪಡಿಸಿ ಆರ್ದ್ರ ಮತ್ತು ಶುಷ್ಕ ಸಂಸ್ಕರಣಾ ಕೊಠಡಿಗಳು ಇರುತ್ತದೆ. ದಾನಿಯ ಮೂಳೆಯನ್ನು ಸಂಸ್ಕರಿಸಿದ ನಂತರ (ಕತ್ತರಿಸುವುದು, ತೊಳೆಯುವುದು, ಪಾಶ್ಚರೀಕರಣ, ಫ್ರೀಜರ್ -ಒಣಗಿಸುವುದು, ಪ್ಯಾಕಿಂಗ್, ಲೇಬಲಿಂಗ್ ಮತ್ತು ಸೀಲಿಂಗ್), ಉತ್ತಮ ಗುಣಮಟ್ಟದ ಮತ್ತು ಸುರಕ್ಷತೆಯನ್ನು (ತೇವಾಂಶ-ಮುಕ್ತ ಮತ್ತು ಕಡಿಮೆ ಬಯೋಬರ್ಡನ್) ಖಾತ್ರಿಪಡಿಸಿಕೊಂಡ ನಂತರ, ಅವುಗಳನ್ನು ಗಾಮಾ ವಿಕಿರಣದೊಂದಿಗೆ ಕ್ರಿಮಿಮುಕ್ತಗೊಳಿಸಬೇಕು. ಈ ಎಲ್ಲಾ ಕಾರ್ಯವಿಧಾನಗಳೊಂದಿಗೆ (ಸಂಗ್ರಹಿಸುವುದು, ಸಂಸ್ಕರಿಸುವುದು , ಶೇಖರಣೆ/ವಿತರಿಸುವುದು), ಬ್ಯಾಂಕ್ ನ ಮೂಳೆಗಳನ್ನು ಅಲೋಗ್ರಾಫ್ಟ್ಗಳಾಗಿ (ಫ್ರೀಜ್-ಡ್ರೈಡ್ ಗಾಮಾ ವಿಕಿರಣಗೊಳಿಸಿದ ಅಂತಿಮ ಉತ್ಪನ್ನ) ಆರ್ಥೋಪೆಡಿಕ್ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಗಳಲ್ಲಿ ಅಗತ್ಯವಾದ ಬೃಹತ್ ಕಸಿಗಳಿಗೆ ಮೂಲವಾಗುತ್ತದೆ . ಬೋನ್ ಬ್ಯಾಂಕ್ ಅಲೋಗ್ರಾಫ್ಟ್ಗಳು ಅಗತ್ಯವಿರುವ ಎಲುಬಿನ ಕಸಿಯ ಗಾತ್ರ/ಪ್ರಮಾಣದ ಸಮಸ್ಯೆಗಳನ್ನು ಪರಿಹರಿಸುತ್ತದೆ” ಎಂದರು.
ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, “ರಾಜ್ಯ ಸರ್ಕಾರದ ಅಧಿಕೃತ ಸಂಸ್ಥೆಯಿಂದ ಈ ಯೋಜನೆಗೆ ಪರವಾನಗಿ ಪ್ರಕ್ರೀಯೆ ಪೂರ್ಣಗೊಂಡ ನಂತರ, ಬೋನ್ ಬ್ಯಾಂಕ್ನ ಉತ್ಪನ್ನಗಳು ಚಿಕಿತ್ಸಾ ಉದ್ದೇಶಗಳಿಗಾಗಿ ಲಭ್ಯವಾಗಲಿದೆ’ ಎಂದರು
ಶ್ರೀಮತಿ ಶ್ರುತಿ ಆರ್ ಪೈ, ಡಾ ಗಿರಿಧರ್ ಕಿಣಿ, ಕುಲಸಚಿವರು ಮಾಹೆ , ಶ್ರೀ ಸಿ ಜಿ ಮುತ್ತಣ್ಣ ಸಿ ಓ ಓ , ಮಾಹೆ, ಮಾಹೆ ಮಣಿಪಾಲದ ಬೋಧಕ ಆಸ್ಪತ್ರೆಯ ಸಿಒಒ ಡಾ.ಆನಂದ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ , ಎಲ್ಲಾ ಸಹ ಡೀನ್ ಗಳು, ಮೂಳೆ ಮತ್ತು ಕೀಲು ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಶ್ಯಾಮಸುಂದರ್ ಭಟ್, ಮೂಳೆ ಮತ್ತು ಕೀಲು ವಿಭಾಗದ ಪ್ರಾಧ್ಯಾಪಕ ಹಾಗೂ ಬೋನ್ ಬ್ಯಾಂಕ್ ಇದರ ಸಂಚಾಲಕ ಡಾ. ಮೋನಪ್ಪ ನಾಯ್ಕ್ ಆರೂರು ಉಪಸ್ಥಿತರಿದ್ದರು.