ಉಡುಪಿ :ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಎಂದು ಕೂಗು ಕೇಳಿಬಂದಿತ್ತು. ಈ ಬಗ್ಗೆ ಜನಪ್ರತಿನಿಧಿಗಳು ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಸರ್ಕಾರದ ಅಧಿಕೃತ ಆದೇಶ ಬಂದಿದ್ದು ಸೆ.19ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಬೇಡಿಕೆಯ ಹಿನ್ನಲೆಯಲ್ಲಿ 2023ನೇ ಸಾಲಿನ ಗಣೇಶ ಚತುರ್ಥಿ ಹಬ್ಬದ ರಜೆಯನ್ನು ಉಡುಪಿ ಜಿಲ್ಲೆಯಾದ್ಯಂತ 18.09.2023ರ ಸೋಮವಾರದಂದು ರದ್ದುಗೊಳಿಸಿ ದಿನಾಂಕ:19.09.2023 ಮಂಗಳವಾರದಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ಆದೇಶಿಸಲಾಗಿದೆ.
ರಾಜ್ಯಾದ್ಯಂತ ಸೆ.18ರಂದು ಸಾರ್ವತ್ರಿಕ ರಜೆಯನ್ನು ಸರ್ಕಾರ ಘೋಷಣೆಮಾಡಿದೆ. ಆದರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸ್ಥಳೀಯ ಪರಿಸ್ಥಿತಿಗಳ ಅನುಸಾರ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಈ ಜಿಲ್ಲೆಯಲ್ಲಿ ಸೆ.18ರ ಬದಲಾಗಿ ಸೆ.19ರ ಮಂಗಳವಾರ ಗಣೇಶ ಹಬ್ಬದ ರಜೆಯನ್ನು ಘೋಷಣೆ ಮಾಡಲಾಗಿದೆ.