ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 19 ಲಕ್ಷ ರೂ. ವೆಚ್ಚದಲ್ಲಿ 6 ಹಾಸಿಗೆಗಳ ವಾರ್ಡ್‌ಗಳನ್ನು ನಿರ್ಮಿಸುವ ಕಾಮಗಾರಿ ಬಹುಪಾಲು ಪೂರ್ಣಗೊಂಡಿದ್ದು, ಪ್ರಾಯೋಗಿಕ ಯೋಜನೆಯಾಗಿ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೇ ಕೇರ್ ಸೆಂಟರ್ ಆರಂಭಿಸಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ.
ಶಿರೂರು, ಕೊಲ್ಲೂರು, ಕಿರಿಮಂಜೇಶ್ವರ, ಸಿದ್ದಾಪುರ, ಬಿದ್ಕಲ್‌ಕಟ್ಟೆ, ಕೆದೂರು, ಆಲೂರು, ಹಿರಿಯಡಕ, ಕೊಕ್ಕರ್ಣೆ, ಇರ್ವತ್ತೂರು ಮತ್ತು ಮಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಸಿಆರ್‌ಪಿ ಯೋಜನೆಯಡಿ 6 ಹಾಸಿಗೆಯ ವಾರ್ಡ್‌ಗಳನ್ನು ತಲಾ 19 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಆದರೆ, ವೈದ್ಯಕೀಯ ಪರಿಕರ ಹಾಗೂ ಸಿಬಂದಿ ಸೇವೆ ಇನ್ನೂ ಒದಗಿಸದೇ ಇರುವುದರಿಂದ ಕಾರ್ಯಾರಂಭವಾಗಿಲ್ಲ. ಯಾವ ರೀತಿಯ ಬೆಡ್ ಆವಶ್ಯಕತೆಯಿದೆ ಮತ್ತು ಸಿಬಂದಿ ನೇಮಕ ಇತ್ಯಾದಿಗಳ ಚರ್ಚೆ ನಡೆಯುತ್ತಿದೆ
ಸಂತ್ರಸ್ತರಿಗೆ ಪುನರ್‌ವಸತಿ ಕೇಂದ್ರದ ರೀತಿಯಲ್ಲಿ ದಾಖಲಾತಿ ಮಾಡಿಕೊಂಡು ಅವರ ಆರೈಕೆ ಮಾಡುವುದಕ್ಕಿಂತ ಡೇ ಕೇರ್ ಸೆಂಟರ್ ಮಾದರಿಯಲ್ಲಿ ಬೆಳಗ್ಗೆ ಬಂದು ಪೂರ್ಣ ಚಿಕಿತ್ಸೆ ಪಡೆದು, ಸಂಜೆ ವಾಪಸ್ ಹೋಗಬಹುದಾಗಿದೆ
ಕಿರಿಮಂಜೇಶ್ವರ ಹಾಗೂ ಹಿರಿಯಡಕದಲ್ಲಿ ಪೈಲೆಟ್ ಯೋಜನೆಯಾಗಿ ಫಿಜಿಯೋಥೆರಪಿ ಯುನಿಟ್ ಆಗಿ ರೂಪಿಸುವ ಹಂತದಲ್ಲಿದ್ದೇವೆ. ಎಲ್ಲಿ ಪ್ರಕರಣ ಜಾಸ್ತಿ ಇದೆಯೋ ಆ ಭಾಗಕ್ಕೆ ಮೊದಲ ಆದ್ಯತೆಯಲ್ಲಿ ಡೇ ಕೇರ್ ಕೇಂದ್ರ ಆರಂಭಿಸಲಾಗುವುದು. ಮುಂದೆ ಎಲ್ಲ ಕಡೆಗೂ ವಿಸ್ತರಿಸಲಿದ್ದೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಚ್. ನಾಗಭೂಷಣ ಉಡುಪ ಮಾಹಿತಿ ನೀಡಿದರು.