ಮಣಿಪಾಲ, 14 ಸೆಪ್ಟೆಂಬರ್ 2023:ಬಾಲ್ಯದ ಕ್ಯಾನ್ಸರ್ ಗಳನ್ನು ಆರಂಭಿಕ ಹಂತದಲ್ಲಿ ಪತ್ತೆಮಾಡಿ ಮತ್ತು ತಜ್ಞ ವೈದ್ಯರ ತಂಡದ ಮೂಲಕ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆತರೆ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.
ಸೆಪ್ಟೆಂಬರ್ ತಿಂಗಳು ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸವಾಗಿದ್ದು, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು ಆಕ್ಸೆಸ್ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಸಹಯೋಗದೊಂದಿಗೆ ಬಾಲ್ಯದ ಕ್ಯಾನ್ಸರ್ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು 12ನೇ ಸೆಪ್ಟೆಂಬರ್ ರಂದು ಜಾಗೃತಿ ನಡಿಗೆ ಕಾರ್ಯಕ್ರಮ ಏರ್ಪಡಿಸಿತ್ತು.
ವಿಭಾಗದ ಮುಖ್ಯಸ್ಥ ಡಾ.ವಾಸುದೇವ ಭಟ್ ಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ”ಭಾರತದಲ್ಲಿ ಪ್ರತಿ ವರ್ಷ ಸುಮಾರು 78,000 ಮಕ್ಕಳು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ನಮ್ಮ ದೇಶದಲ್ಲಿ ಮುಖ್ಯವಾಗಿ ವಿಳಂಬವಾಗಿ ಪತ್ತೆಮಾಡುವುದು, ನುರಿತ ತಜ್ಞರಲ್ಲಿಗೆ ಬರುವಾಗ ತಡವಾಗುವುದು ಮತ್ತು ಕ್ಯಾನ್ಸರ್ ಒಂದು ಕಳಂಕ ಎನ್ನುವ ಮನೋಬಾವದ ಕಾರಣದಿಂದ ಗುಣವಾಗುವ ದರದಲ್ಲಿ ಕಡಿಮೆ ಇದೆ ” ಎಂದರು. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಪದ್ಮರಾಜ್ ಹೆಗ್ಡೆ ಅವರು ಮೇಣದ ಬತ್ತಿ ನಡಿಗೆಗೆ ಚಾಲನೆ ನೀಡಿ ಮಾತನಾಡಿ “ಚಿನ್ನವು ಅಮೂಲ್ಯವಾದ ಲೋಹವನ್ನು ಸಾಂಕೇತಿಸುವುದರಿಂದ ಕೆ ಎಂ ಸಿ ಯ ಕಾರಂಜಿಯನ್ನು ಚಿನ್ನದಂತ ಬೆಳಕಿನಿಂದ ಬೆಳಗಿಸಲಾಗಿದೆ ಮತ್ತು ನಮ್ಮ ಜೀವನದಲ್ಲಿ ಅತ್ಯಮೂಲ್ಯವಾದವರೆಂದರೆ ಅದು ನಮ್ಮ ಮಕ್ಕಳು ಅವರನ್ನು ಪ್ರತಿಬಿಂಬಿಸಲು ಇದು ಪರಿಪೂರ್ಣ ಬಣ್ಣವಾಗಿದೆ” ಎಂದು ಹೇಳಿದರು. ನಡಿಗೆಯು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಕಾರಂಜಿ ವೃತ್ತದಿಂದ ಹೊರಟು ಆಕ್ಸೆಸ್ಲೈಫ್, ಮಾಹೆ, ಮಣಿಪಾಲದವರೆಗೆ ನಡೆಯಿತು. ಈ ಕಾರ್ಯಕ್ರಮಕ್ಕೆ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು , ವಿದ್ಯಾರ್ಥಿ ಸಮಿತಿ ಸ್ವಯಂಸೇವಕರು ಮತ್ತು ಇತರ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳು ಮತ್ತು ಅವರ ಆರೈಕೆ ಮಾಡುವವರ ಬೆಂಬಲದ ಸಂಕೇತವನ್ನು ತೋರಿಸಲು ಸಾಕ್ಷಿಯಾದರು. ನಡಿಗೆಯ ಮೊದಲು ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ವಿವಿಧ ಆಟಗಳು ಮತ್ತು ಮನರಂಜನಾ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು.