ಉಡುಪಿ: ದೃಶ್ಯ ನ್ಯೂಸ್ : ಸೆಪ್ಟೆಂಬರ್ 16 ರಂದು ಪುತ್ತಿಗೆ ಮಠ ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟನೆಗೊಳ್ಳಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಹೇಳಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟನೆ ಮಾಡಿ ಸಂಜೆ 4.00 ಕ್ಕೆ ಪರ್ಯಾಯ ಲಾಂಛನವನ್ನು ಅನಾವರಣಗೊಳಿಸಿ ಸಮಾಲೋಚನಾ ಸಭೆ ನಡೆಸಲಿದ್ದಾರೆ ಎಂದರು.
ಪುತ್ತಿಗೆ ಮಠದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪುತ್ತಿಗೆ ಮಠದ ಸುಗುಣ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ನಾಲ್ಕನೇ ಬಾರಿ, ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥರೊಡಗೂಡಿ 2024ರ ಜ. 18 ರಂದು ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ ಎಂದರು.
ವಿಶ್ವ ಗೀತಾ ಪರ್ಯಾಯಕ್ಕಾಗಿ ಭರದ ಪೂರ್ವ ತಯಾರಿ ನಡೆಯುತ್ತಿದೆ. ಪರ್ಯಾಯದ ಪೂರ್ವ ತಯಾರಿಗಾಗಿ 21ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಪರ್ಯಾಯಕ್ಕೆ ಐದು ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದ್ದು ಪುತ್ತಿಗೆ ಶ್ರೀಗಳ ಮಹತ್ವಾಕಾಂಕ್ಷೆ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞವು ವಿಶ್ವದಾದ್ಯಂತ ನಡೆಯುತ್ತಿದೆ ಪುತ್ತಿಗೆ ಶ್ರೀಗಳು ಜ.8.2024 ರಂದು ಉಡುಪಿ ಪುರಪ್ರವೇಶ ಮಾಡಲಿದ್ದಾರೆ ಎಂದರು.
ಉಡುಪಿ ಶಾಸಕರ ನೇತೃತ್ವದಲ್ಲಿ ಸ್ವಾಗತ ಸಮಿತಿ ನಿಯೋಗ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರ ಸಹಿತ ವಿವಿಧ ಇಲಾಖಾ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದರು.