ಉಡುಪಿ : ಪರ್ಯಾಯ ಮಹೋತ್ಸವ 50 ಕೋಟಿ ವಿಶೇಷ ಅನುದಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ*
ಉಡುಪಿ :ಸೆಪ್ಟೆಂಬರ್ 13 ದೃಶ್ಯ ನ್ಯೂಸ್ : ಉಡುಪಿ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ನಗರದ ರಸ್ತೆ, ಮೂಲ ಸೌಕರ್ಯ ಅಭಿವೃದ್ಧಿ ಸಹಿತ ವಿವಿಧ ಕಾಮಗಾರಿಗಳಿಗೆ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ .ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಉಡುಪಿ ಜಿಲ್ಲೆಯ ಮಳೆ ಹಾನಿ
ಕಾಮಗಾರಿಗೆ ಅನುದಾನ ಬಿಡುಗಡೆ, ಕೂಸಮ್ಮ ಶಂಭು ಶೆೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮಕ್ಕಳ ಆಸ್ಪತ್ರೆ ನಿರ್ವಹಣೆಗೆ ಅನುದಾನ, ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ವಿಭಾಗದ ಅವ್ಯವಸ್ಥೆ ಸರಿಪಡಿಸಲು ಕ್ರಮ, ಸರಕಾರಿ ಮೆಡಿಕಲ್ ಕಾಲೇಜು ಮಂಜೂರು, ಮಣಿಪಾಲದಲ್ಲಿ ನೂತನ ಅಗ್ನಿಶಾಮಕ ಠಾಣೆ ನಿರ್ಮಾಣ, ಮೀನುಗಾರಿಕೆ ಅಭಿವೃದ್ದಿ ಯೋಜನೆಗಳಿಗೆ ವಿಶೇಷ ಒತ್ತು ಸಹಿತ ವಿವಿಧ ಬೇಡಿಕೆಗಳ ಬಗ್ಗೆ ತಕ್ಷಣ ಸ್ಪಂದಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಈ ಬಾರಿಯ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಯಶ್ ಪಾಲ್ ಸುವರ್ಣ ಆಹ್ವಾನಿಸಿದರು.