ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಫೊಟೊಬಯೊಮಾಡ್ಯುಲೇಶನ್ ಥೆರಪಿಯ ಜಾಗತಿಕ ಸಂಘಟನೆ [ವರ್ಲ್ಡ್ ಎಸೋಸಿಯೇಶನ್ ಫಾರ್ ಫೊಟೊಬಯೊಮಾಡ್ಯುಲೇಶನ್ ಥೆರಪಿ-WALT) ಮತ್ತು ಭಾರತೀಯ ಪಾದಚಿಕಿತ್ಸೆ ಸಂಘಟನೆ [ಇಂಡಿಯನ್ ಪೋಡಿಯಾಟ್ರಿ ಎಸೋಸಿಯೇಶನ್- IPA]ಯ ಕರ್ನಾಟಕ ವಿಭಾಗ- ಸಂಯುಕ್ತವಾಗಿ ಡಯಾಬಿಟಿಕ್ ಪಾದ ಪ್ರಮಾಣಮಾಪನ ಮತ್ತು ನಿಭಾವಣೆಯ ಕುರಿತ ಸಮ್ಮೇಳನ ಪೂರ್ವ ಕಾರ್ಯಾಗಾರ [ಪ್ರಿ- ಕಾಂಗ್ರೆಸ್ ವರ್ಕ್‌ಶಾಪ್] ವನ್ನು ಸೆಪ್ಟೆಂಬರ್ 13, 2023 ರಂದು ಮಣಿಪಾಲ್ ಆರೋಗ್ಯವಿಜ್ಞಾನ ಕಾಲೇಜಿನ ಕೆಳಮಹಡಿಯ ಟವರ್-1 ರ ಪ್ರಿಕ್ಲಿನಿಕಲ್ ಲ್ಯಾಮ್‌ನಲ್ಲಿ ಆಯೋಜಿಸಿಲಾಗಿತ್ತು.
ಈ ಕಾರ್ಯಾಗಾರದಲ್ಲಿ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಗಳನ್ನು ಹೊಂದಿರುವ ಅಮೆರಿಕ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಇರಾನ್ ದೇಶಗಳ ಸುಮಾರು 200 ಉನ್ನತದರ್ಜೆಯ ವಿಶ್ವವಿದ್ಯಾನಿಲಯಗಳ ಪ್ರತಿನಿಧಿಗಳು ವಿಶೇಷವಾದ ಆಸಕ್ತಿಯನ್ನು ಹೊಂದಿ ಪಾಲ್ಗೊಂಡಿದ್ದಾರೆ. ಫೊಟೊಬಯೊಮಾಡ್ಯುಲೇಶನ್ [ದ್ಯುತಿಜೈವಿಕಪರಿವರ್ತನ] ಕ್ಷೇತ್ರದ ಉನ್ನತ ಮಟ್ಟದ ಸಂಸ್ಥೆಗಳಿಂದ ಅತ್ಯುತ್ತಮವಾದ ಪ್ರತಿಕ್ರಿಯೆ ದೊರೆತಿದ್ದು ಈ ಕಾರ್ಯಾಗಾರವನ್ನು ‘ಔದ್ಯಮಿಕ- ಶೈಕ್ಷಣಿಕ ಸಹಭಾಗಿತ್ವ’ ಎಂದು ಬಣ್ಣಿಸಲಾಗಿದೆ.
ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಾಹೆ, ಮಣಿಪಾಲ್ ಇದರ ಡೀನ್ ಆಗಿರುವ ಡಾ. ಪದ್ಮರಾಜ್ ಹೆಗ್ಡೆ ಕಾರ್ಯಾಗಾರವನ್ನು ಉದ್ಘಾಟಿಸಿದರು. ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್, ಮಾಹೆಯ ಬೇಸಿಕ್ ಮೆಡಿಕಲ್ ಸಾಯನ್ಸ್‌ಸ್‌ನ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿರುವ ಡಾ. ಉಲ್ಲಾಸ್ ಕಾಮತ್, ಡಯಾಬಿಟಿಕ್ ತಜ್ಞ ಡಾ. ರಜನೀಶ್ ಸಕ್ಸೇನಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಇಂಡಿಯನ್ ಪೋಡಿಯಟ್ರಿ ಸಂಘಟನೆಯ ಅಧ್ಯಕ್ಷ ಡಾ. ಎಪಿಎಸ್ ಸೂರಿ ಕಾರ್ಯಾಗಾರದ ರೂಪುರೇಷೆಯನ್ನು ಪ್ರಸ್ತುತಿಪಡಿಸಿದರು. ಎಂಸಿಪಿಎಚ್‌ನ ಡೀನ್ ಮತ್ತು ಐಪಿಎ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ. ಜಿ. ಅರುಣ್ ಮಯ್ಯ ಸ್ವಾಗತ ಭಾಷಣ ಮಾಡಿದರು.
ಮಾಹೆ, ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಅವರು ‘ಪ್ರಸ್ತುತ ಸಮಾವೇಶವು ಐಪಿಎ, ಮಾಹೆ ಮತ್ತು ವಾಲ್ಟ್ ಸಂಸ್ಥೆಗಳ ನಿಕಟ ಬಂಧಕ್ಕೆ ಸಾಕ್ಷಿಯಾಗಿದೆ. ಈ ಮೂರೂ ಸಂಸ್ಥೆಗಳ ಸಹಭಾಗಿತ್ವದಿಂದ ಕಾರ್ಯಾಗಾರ ಮಾತ್ರವಲ್ಲ, ಮುಂದಿನ ಸಮಾವೇಶವೂ ಅಭೂತಪೂರ್ವ ಯಶಸ್ಸನ್ನು ಕಾಣಲಿದೆ’ ಎಂದರು.
ಐಎಪಿಯ ರಾಷ್ಟ್ರೀಯ ಕಾರ್ಯದರ್ಶಿ ರಜನೀಶ್ ಸಕ್ಸೇನಾ ಅವರು ಕಾರ್ಯಾಗಾರದ ಬಗ್ಗೆ ಪ್ರತಿಕ್ರಿಯಿಸುತ್ತ, ‘ಫೊಟೊಬಯೋಮಾಡ್ಯುಲೇಶನ್ [ಪಿಬಿಎಂ]ನ್ನು ಅನ್ವಯಿಸಿ ನೋವು ನಿವಾರಿಸುವ ಮತ್ತು ಅಂಗಾಂಶ ಚಿಕಿತ್ಸೆಯನ್ನು ಉತ್ತೇಜಿಸುವ ಪ್ರಯತ್ನದ ಶೋಧನೆ ಪ್ರಸ್ತುತ ಕಾರ್ಯಾಗಾರದಲ್ಲಿ ನಡೆದಿದೆ. ಫೊಟೊಬಯೊಮಾಡ್ಯುಲೇಶನ್‌ನ ಅನ್ವಯ ಸಾಧ್ಯತೆಗಳನ್ನು ವಿಸ್ತರಿಸುವಲ್ಲಿ ಉದ್ಯಮತಜ್ಞರು ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖರಾಗುವರೆಂಬುದನ್ನು ಈ ಕಾರ್ಯಾಗಾರದಲ್ಲಿ ಗ್ರಹಿಸಬಹುದಾಗಿದೆ’ ಎಂದರು.
ಮಾಹೆಯ ಬೇಸಿಕ್ ಸಾಯನ್ಸಸ್‌ನ ಮುಖ್ಯಸ್ಥರಾದ ಡಾ. ಉಲ್ಲಾಸ್ ಕಾಮತ್ ಅವರು ಮಾತನಾಡಿ, ‘ಈ ಕಾರ್ಯಾಗಾರವು ಸುಧಾರಿತ ಜ್ಞಾನ ಮತ್ತು ಫೊಟೊಬಯೊಮಾಡ್ಯುಲೇಶನ್ ಹಾಗೂ ಪಾದಚಿಕಿತ್ಸೆ ಕ್ಷೇತ್ರಗಳ ಸಹಯೋಗಕ್ಕೆ ನಾಂದಿ ಹಾಡಿದೆ’ ಎಂದರು.
ಮಾಹೆ, ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ. ಪದ್ಮರಾಜ ಹೆಗ್ಡೆ ಅವರು, ‘ಫೊಟೊಬಯೊಮಾಡ್ಯುಲೇಶನ್ ಮತ್ತು ಪೋಡಿಯಾಟ್ರಿ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದಿರುವ ಪ್ರಾಯೋಗಿಕ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲಿ ಆರೋಗ್ಯವಿಜ್ಞಾನ ವಿಭಾಗದ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳ ಸಾಧ್ಯತೆಗಳನ್ನು ಈ ಕಾರ್ಯಾಗಾರ ಮುಂದಿಟ್ಟಿದೆ. ನೇರವಾದ ತರಬೇತಿ ಮತ್ತು ಸಂವಾದ ಕಲಾಪಗಳ ಮೂಲಕ ಈ ಕಾರ್ಯಾಗಾರವು ನವೀನ ತಾಂತ್ರಿಕತೆ, ತಂತ್ರಜ್ಞಾನ, ಸೂಕ್ತ ಪ್ರಯೋಗಗಳಿಗೆ ತೆರೆದುಕೊಳ್ಳುವ ಅವಕಾಶವನ್ನು ಕೂಡ ನೀಡಿದೆ. ಈ ಕಾರ್ಯಾಗಾರದ ಭಾಗವಾಗಿರಲು ಹೆಮ್ಮೆ ಪಡುತ್ತೇವೆ’ ಎಂದರು.
ಎಂಸಿಪಿಎಚ್‌ನ ಡೀನ್, ಐಪಿಎ ಕರ್ನಾಟಕ ವಿಭಾಗದ ಅಧ್ಯಕ್ಷ, ವಾಲ್ಟ್‌ನ ಸದಸ್ಯ-ನಿರ್ದೇಶಕ ಡಾ. ಜಿ. ಅರುಣ್ ಮಯ್ಯ ಅವರು ನೆರೆದವರನ್ನು ಸ್ವಾಗತಿಸಿದರು. ಎಂಸಿಪಿಎಚ್‌ನ ಮುಖೇಶ್ ಕುಮಾರ್ ಸಿನ್ಹ ಧನ್ಯವಾದ ಸಮರ್ಪಣೆ ಮಾಡಿದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [MAHE] : ಶೈಕ್ಷಣಿಕ ಗುಣಾತ್ಮಕತೆ, ಸಂಶೋಧನೆ ಮತ್ತು ನಾವೀನ್ಯಗಳ ಬದ್ಧತೆಗೆ ಹೆಸರಾದ ಶ್ರೇಷ್ಠವಾದ ಶೈಕ್ಷಣಿಕ ಸಂಸ್ಥೆಯಾಗಿದೆ. ಭಾರತದಲ್ಲಿ ಉನ್ನತಶಿಕ್ಷಣದ ಗುಣಮಟ್ಟವನ್ನು ವೃದ್ಧಿಸುವಲ್ಲಿ ಮಾಹೆಯು ಗಣನೀಯ ಕೊಡುಗೆಯನ್ನು ನೀಡುತ್ತ ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯದ ನೇತಾರರನ್ನು ರೂಪಿಸುವ ಕಾರ್ಯದಲ್ಲಿ ಮಾಹೆಯು ಮುಂಚೂಣಿಯಲ್ಲಿದೆ.
ಫೊಟೊಬಯೋಮಾಡ್ಯುಲೇಶನ್ ಥೆರಪಿಯ ವಿಶ್ವ ಜಾಗತಿಕ ಸಂಸ್ಥೆ [WALT] : ಇದು ಜಾಗತಿಕ ಮಟ್ಟದ ಸಂಸ್ಥೆಯಾಗಿದ್ದು ಫೊಟೊಬಯೊಮಾಡ್ಯುಲೇಶನ್ ಥೆರಪಿಯಲ್ಲಿ ಸುಧಾರಿತ ವೈಜ್ಞಾನಿಕತೆ ಮತ್ತು ಪ್ರಾಯೋಗಿಕತೆಗೆ ಮೀಸಲಾಗಿದೆ. ವಾಲ್ಟ್ ಫೊಟೊಬಯೊಮಾಡ್ಯುಲೇಶನ್ ಥೆರಪಿಯ ಅರ್ಥಮಾಡಿಕೊಳ್ಳುವಿಕೆ ಮತ್ತು ಅನ್ವಯಿಸುವಿಕೆಯನ್ನು ಅಧಿಕಗೊಳಿಸಲು ಸಂಶೋಧನೆ, ಶಿಕ್ಷಣ ಮತ್ತು ಸಹಭಾಗಿತ್ವಗಳನ್ನು ಉತ್ತೇಜಿಸಲು ಬದ್ಧವಾಗಿರುವ ಸಂಸ್ಥೆಯಾಗಿದೆ.
ಇಂಡಿಯನ್ ಪೋಡಿಯಾಟ್ರಿ ಅಸೋಸಿಯೇಶನ್- ಕರ್ನಾಟಕ ವಿಭಾಗ : ಭಾರತದಲ್ಲಿ ಪಾದಗಳ ಆರೋಗ್ಯ ಮತ್ತು ಆರೈಕೆಗಳಿಗೆ ಬದ್ಧವಾದ ವೃತ್ತಿಪರ ಘಟಕವಾಗಿದೆ. ಐಪಿಎ ಕರ್ನಾಟಕ ವಿಭಾಗವು ಪ್ರಾದೇಶಿಕವಾಗಿ ಪಾದಗಳ ಚಿಕಿತ್ಸೆಯನ್ನು ಸುಧಾರಿತ ಮಟ್ಟದಲ್ಲಿ ರೂಪಿಸುವಲ್ಲಿ ಪ್ರಧಾನಪಾತ್ರ ವಹಿಸುತ್ತಿದೆ.