ಮಂಗಳೂರು : ಗಣೇಶ ಚತುರ್ಥಿ ಹಬ್ಬಕ್ಕೆ ಈ ವರ್ಷದ ಸರಕಾರಿ ರಜೆಗಳ ಪಟ್ಟಿಯಲ್ಲಿ ಸೆಪ್ಟೆಂಬರ್ 18 ರಂದು ರಜೆ ಘೋಷಿಸಿದ್ದು, ಇಡೀ ವಿಶ್ವದ ಹಿಂದುಗಳ ಅತ್ಯಂತ ಪ್ರಮುಖ ಹಬ್ಬ ಗಣೇಶ ಚತುರ್ಥಿ ಹಬ್ಬವನ್ನು ಸೆಪ್ಟೆಂಬರ್ 19 ರಂದು ಆಚರಿಸಲಿರುವ ಕಾರಣ ಅದೇ ದಿನ ರಜೆಯನ್ನು ನೀಡಲು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ವಿಶ್ವ ಹಿಂದು ಪರಿಷತ್ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಗಣೇಶ ಚತುರ್ಥಿ ಹಬ್ಬ ಇಡೀ ವಿಶ್ವದ ಹಿಂದುಗಳಿಗೆ ಅತ್ಯಂತ ಸಡಗರದ ಹಬ್ಬ, ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ಥಿ ದಿನ ಇಡೀ ಹಿಂದೂ ಸಮಾಜ ವಿಘ್ನ ವಿನಾಶಕ ಗಣೇಶನ ಹಬ್ಬವನ್ನು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದೆ. ಈ ವರ್ಷ ಶೋಭನ ನಾಮ ಸಂವತ್ಸರದಲ್ಲಿ ಅಂದರೆ 2023 ರಲ್ಲಿ ಗಣೇಶ ಚತುರ್ಥಿ ತಾರೀಕು ಸೆಪ್ಟೆಂಬರ್ 19 2023 ಮಂಗಳವಾರ ಆಚರಣೆ ನಡೆಯಲಿದ್ದು. ಆದರೆ ಸರಕಾರಿ ರಜೆಯ ಪಟ್ಟಿಯಲ್ಲಿ ತಾರೀಕು ಸೆಪ್ಟೆಂಬರ್ 18 2023 ಸೋಮವಾರ ರಜೆ ಇರುವುದು ನಮ್ಮ ಗಮನಕ್ಕೆ ಬಂದಿರುತ್ತದೆ ಹಾಗಾಗಿ ತಾವುಗಳು ರಜೆಯನ್ನು ಬದಲಾವಣೆ ಮಾಡಿ ಗಣೇಶ ಚತುರ್ಥಿ ದಿನ ಅಂದರೆ ತಾರೀಕು ಸೆಪ್ಟೆಂಬರ್ 19 2023 ಮಂಗಳವಾರ ಸರಕಾರಿ ರಜೆಯನ್ನು ನೀಡುವಂತೆ ಕ್ರಮಕೈಗೊಳ್ಳಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರವನ್ನು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿಗಳಾದ ಶರಣ್ ಪಂಪುವೆಲ್, ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರಾದ ಮನೋಹರ್ ಸುವರ್ಣ, ವಿಭಾಗ ಸಂಯೋಜಕ್ ಪುನೀತ್ ಅತ್ತಾವರ, ಜಿಲ್ಲಾ ಸಂಯೋಜಕ್ ನವೀನ ಮೂಡುಶೆಡ್ಡೆ ಮೊದಲಾದವರು ಉಪಸ್ಥಿತರಿದ್ದರು.