ನವದೆಹಲಿ: ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಡೀಸೆಲ್ ವಾಹನ ಖರೀದಿ ಮೇಲೆ ಜಿಎಸ್‌ಟಿ ಮಾದರಿಯಲ್ಲೇ ಮಾಲಿನ್ಯ ತೆರಿಗೆ ಎಂದು 10% ಹೆಚ್ಚುವರಿ ತೆರಿಗೆ ವಿಧಿಸಲಾಗುವುದು ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ ಎಂದು ವರದಿಯಾಗಿತ್ತು
ಭಾರತೀಯ ವಾಹನ ತಯಾರಕರ ಸಮಿತಿಯ 63ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಾಗರಿಕರ ಮೇಲೆ ಹೆಚ್ಚುತ್ತಿರುವ ವಾಯು ಮಾಲಿನ್ಯದ ಕುರಿತು ಕಳವಳ ವ್ಯಕ್ತಪಡಿಸಿ ಈ ನಿರ್ಧಾರ ಪ್ರಕಟಿಸಿದ್ದರು ಎಂದು ಏಜೆನ್ಸಿಗಳು ವರದಿ ಮಾಡಿದ್ದವು.
ಈ ಕುರಿತು ಹೆಚ್ಚುವರಿ 10% ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆಯಲಿದ್ದೇನೆ ಎಂದರು.
ಬಹುತೇಕ ರಾಷ್ಟ್ರಗಳಲ್ಲಿ ಡೀಸೆಲ್ ವಾಹನಗಳ ಮೇಲೆ ಇಂಥ ತೆರಿಗೆ ವಿಧಿಸಲಾಗುತ್ತಿದೆ ಎಂದರು.
ಆದರೆ ಇದು ಸುದ್ದಿಯಾಗುತ್ತಿದ್ದಂತೆ ಗಡ್ಕರಿ ಟ್ವೀಟ್ ಮಾಡಿದ್ದು ಅಂಥ ಯಾವುದೇ ಪ್ರಸ್ತಾಪ ಕೇಂದ್ರದ ಮುಂದಿಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
2070ರ ಹೊತ್ತಿಗೆ ಶೂನ್ಯ ಇಂಗಾಲದ ಗುರಿಗೆ ಕೇಂದ್ರ ಬದ್ಧವಾಗಿದೆ. ಮಾಲಿನ್ಯಕ್ಕೆ ಕಾರಣವಾಗಿರುವ ಡೀಸೆಲ್ ವಾಹನಗಳು ಮತ್ತು ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯನ್ನು ಪರಿಗಣಿಸಿ ಪರ್ಯಾಯ ಹಾಗೂ ಪರಿಸರ ಸ್ನೇಹಿ ಇಂಧನ ಮೂಲ ಹುಡುಕುವ ಅಗತ್ಯವಿದೆ. ಇವುಗಳನ್ನು ಆಮದು ಮಾಡಿಕೊಳ್ಳಬೇಕಾಗಬಹುದು. ಅದು ಆರ್ಥಿಕವಾಗಿಯೂ ಹೊರಯಾಗಬಾರದು ಮತ್ತು ಪರಿಸರಕ್ಕೂ ಹಾನಿ ಮಾಡಬಾರದು ಎಂದಿದ್ದಾರೆ.