ಮಾರುಕಟ್ಟೆಯಲ್ಲಿ ಅಕ್ಕಿಯ ದರದಲ್ಲಿ ಏರಿಕೆಯಾಗಿದೆ. ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಸರಾಸರಿ ಆಹಾರ ದರ ಸೂಚ್ಯಂಕದ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿಯ ದರ ಶೇ.9.8ರಷ್ಟು ಏರಿಕೆ ಕಂಡಿದೆ.ಇದು 15 ವರ್ಷಗಳಲ್ಲಿಯೇ ಗರಿಷ್ಠ ಮಟ್ಟದ ಏರಿಕೆಯಾಗಿದೆ.
ಎರಡು ತಿಂಗಳ ಹಿಂದೆ ಇದ್ದ ಅಕ್ಕಿದರ ಈಗ 10 ರಿಂದ 20 ರೂ.ವರೆಗೆ ದುಬಾರಿಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈ ದರಕ್ಕೆ ಶೇಕಡ 10ರಷ್ಟು ಸೇರಿಸಿ ಮಾರಾಟ ಮಾಡಲಾಗುತ್ತದೆ.
ದೋಸೆ, ಇಡ್ಲಿ ಅಕ್ಕಿ ದರ 32 ರೂ. ನಿಂದ 40 ರೂ., ಸ್ಟೀಮ್ ಅಕ್ಕಿ ದರ 40 ರಿಂದ 50 ರೂ., ರಾ ರೈಸ್ ದರ 47 ರೂ. ನಿಂದ 54 ರೂ., ಕೊಲ್ಲಂ ರೈಸ್ ದರ 60 ರಿಂದ 62 ರೂ.ಗೆ ಏರಿಕೆಯಾಗಿದ್ದು, ಕುಚಲಕ್ಕಿ ದರ ಕೂಡ ಏರಿಕೆ ಕಂಡಿದೆ.
ಕೊರೊನಾ ನಂತರ ಅಕ್ಕಿ ಬಳಕೆಯಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಭಾರತದ ಅಕ್ಕಿ ರಫ್ತು ನಿರ್ಬಂಧ, ಹವಾಮಾನ ವೈಪರೀತ್ಯದಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.