ಮಂಗಳೂರು: ನಗರದ 24ನೇ ಮೇಯರ್ ಆಗಿ ಬಿಜೆಪಿ ಬೆಂಬಲಿತ ಸುಧೀರ್ ಶೆಟ್ಟಿ ಕಣ್ಣೂರ್ ಹಾಗೂ ಉಪ ಮೇಯರ್ ಆಗಿ ಸುನೀತಾ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ನೇತೃತ್ವದಲ್ಲಿ ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಸುಧೀರ್ ಶೆಟ್ಟಿ ಮತ್ತು ಕಾಂಗ್ರೆಸ್‌ನ ನವೀನ್ ಡಿಸೋಜ ನಾಮಪತ್ರ ಸಲ್ಲಿಸಿದ್ದರು.
ಈ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಸುಧೀರ್ ಅವರಿಗೆ 47 ಮತ್ತು ನವೀನ್ ಅವರಿಗೆ 14 ಮತಗಳು ಲಭಿಸಿದವು. ಎಸ್‌ಡಿಪಿಐನ ಇಬ್ಬರು ಸದಸ್ಯರು ತಟಸ್ಥರಾಗಿದ್ದರು.
ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಸುನೀತಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.60 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಯ 44, ಕಾಂಗ್ರೆಸ್‌ನ 14 ಮತ್ತು ಎಸ್‌ಡಿಪಿಐನ ಇಬ್ಬರು ಸದಸ್ಯರು ಇದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ.ಭರತ್ ಶೆಟ್ಟಿ ಅವರೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.