ಉಡುಪಿ : ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಿಗೆ ಸಂಪರ್ಕಕೊಂಡಿಯಂತಿರುವ ಆಗುಂಬೆ ಘಾಟ್ ರಸ್ತೆಯಲ್ಲಿ ಘನವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲ ಘಾಟ್ ರಸ್ತೆಯಲ್ಲಿ ಬಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು.
ಸಾರ್ವಜನಿಕರ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತೆ ಕಳೆದ ಜುಲೈ ತಿಂಗಳಿಂದ ಕಾಲ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ್ದಾರೆ. ಈ ಅವಧಿಯಲ್ಲಿ ಲಘು ವಾಹನ ಹಾಗೂ ಬಸ್ಸುಗಳ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಿದ್ದಾರೆ. ವರ್ಷಂಪ್ರತಿ ಮಳೆಗಾಲದಲ್ಲಿ ಆಗುಂಬೆ ಘಾಟ್ ರಸ್ತೆಯನ್ನು ಹಲವು ತಿಂಗಳ ಕಾಲ ಬಂದ್ ಮಾಡಲಾಗುತ್ತಿದೆ. ಅದರಂತೆ ಈ ವರ್ಷವೂ ಮಾಡಲಾಗಿದ್ದು, ಇದೀಗ ಘನ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಆಗುಂಬೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರುತ್ತಿದ್ದಂತೆಯೇ ಉಡುಪಿ ಜಿಲ್ಲಾಡಳಿತ ಉಡುಪಿ ಜಿಲ್ಲೆಯಿಂದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೆ ಪ್ರಯಾಣಿಸುವ ವಾಹನಗಳು ಕುಂದಾಪುರ, ಹೊಸಂಗಡಿ ಮಾರ್ಗ, ಭಟ್ಕಳ – ಜೋಗ- ಸಾಗರ ಶಿವಮೊಗ್ಗ ಮಾರ್ಗ, ಉಡುಪಿ – ಕಾರ್ಕಳ- ಎಸ್‌ಕೆ ಬಾರ್ಡರ್, ಶೃಂಗೇರಿ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿತ್ತು. ಉಳಿದ ವಾಹನಗಳು ಬೆಳ್ತಂಗಡಿ, ಉಜಿರೆ, ಚಾರ್ಮಾಡಿ ಘಾಟ್ ಮಾರ್ಗದಲ್ಲಿಯೂ ಸಂಚಾರ ನಡೆಸುತ್ತಿದ್ದವು. ಆದ್ರೀಗ ಆಗುಂಬೆ ಘಾಟ್ ರಸ್ತೆಯಲ್ಲಿ ಇನ್ಮುಂದೆ ಘನ ವಾಹನಗಳು ಸಂಚಾರ ನಡೆಸಲಿವೆ