ಮೈಸೂರು: ಶುಭ ಶುಕ್ರವಾರವಾದ ಇಂದು ಬೆಳಗ್ಗೆ 9:45 ರಿಂದ 10:15ರ ತುಲಾ ಲಗ್ನದಲ್ಲಿ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ. ಈ ವೇಳೇ ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿ ಬಳಿ ಶುಕ್ರವಾರ ಅಲಂಕೃತ ಗಜಗಳಿಗೆ ಪುಷ್ಪರ್ಚನೆ ಮಾಡುವ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಚಾಲನೆ ನೀಡಿದರು.
9.45 ರಿಂದ 10-15 ರ ನಡುವೆ ಸಲುವ ತುಲಾ ಶುಭ ಲಗ್ನದಲ್ಲಿ ಸಂಪ್ರದಾಯದಂತೆ ಮೈಸೂರು ಅರಮನೆ ಪುರೋಹಿತರಾದ ಪ್ರಹಲ್ಲಾದರಾವ್ ತಂಡ ವೀರನಹೊಸಹಳ್ಳಿ ಗೇಟ್ ಬಳಿಯ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನೆರೆವೇರಿಸಿದರು. ಗಜಪಯಣದಲ್ಲಿ ಅಭಿಮನ್ಯು ನೇತೃತ್ವದಲ್ಲಿ ಅರ್ಜುನ, ಭೀಮಾ, ಗೋಪಿ, ಧನಂಜಯಾ, ವರಲಕ್ಷ್ಮಿ, ವಿಜಯಾ, ಮಹೇಂದ್ರ ಹಾಗೂ ಕಂಜನ್ ಆನೆಗಳು ಮೈಸೂರಿಗೆ ಆಗಮಿಸಲಿದೆ. ಜಂಬೂ ಪಡೆ ಸೆ. 4ರಂದು ಮೈಸೂರು ಅರಮನೆ ಆವರಣ ಪ್ರವೇಶಿಸಲಿದೆ.ಅದಕ್ಕೆ ಗಜಪಡೆ ವಾಸ್ತವ್ಯಕ್ಕಾಗಿ ತಾತ್ಕಾಲಿಕ ಶೆಡ್ಗಳನ್ನ ನಿರ್ಮಾಣ ಮಾಡಲಾಗಿದೆ. ದಸರಾ ಆನೆಗಳಿಗೆ ಮಾತ್ರವಲ್ಲದೇ ಮಾವುತರು, ಕಾವಾಡಿಗಳ ಕುಟುಂಬಕ್ಕೂ ತಾತ್ಕಾಲಿಕ ಸೂರು ನಿರ್ಮಾಣಗೊಂಡಿದೆ.