ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳನ್ನು ಒಳಗೊಂಡ ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಓಂಕಾರನಗರ ಬಂಟ್ಸ್ ಹಾಸ್ಟೆಲ್ ಇಲ್ಲಿ 17ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಯಾಗ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಲಿದೆ.
ಸೆ.3ರಂದು ಬೆಳಗ್ಗೆ 10 ಗಂಟೆಯಿಂದ ‘ಬಂಟ ಕಲಾ ಸಂಭ್ರಮ’ ಜರಗಲಿದೆ. ಮೂರು ಜಿಲ್ಲೆಗಳ ಸುಮಾರು ಹದಿನೆಂಟು ಪ್ರಮುಖ ತಂಡಗಳು ಭಾಗವಹಿಸಲಿದ್ದು ಒಂದೊಂದು ತಂಡದಲ್ಲಿ ಕನಿಷ್ಠ 25 ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ‘ಭಾರತ ದರ್ಶನ’ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಸೆ. 10ರಂದು ಬೆಳಿಗ್ಗೆ ಗಂಟೆ 8 ರಿಂದ ಇಡೀ ದಿನ ಬಂಟ ಕ್ರೀಡಾ ಸ್ಪರ್ಧೆ ಜರಗಲಿವೆ. ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು 3 ವರ್ಷದಿಂದ 90 ವರ್ಷದವರೆಗಿನ ವಯೋಮಾನದವರಿಗೆ ವಿವಿಧ ವಿಭಾಗಗಳಲ್ಲಿ ನಡೆಯಲಿದೆ ಎಂದು ಹೇಳಿದರು.
ಗಣೇಶೋತ್ಸವ ಸಮಿತಿಯ ಸಂಚಾಲಕ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಸೆ.18ರಂದು ಅಪರಾಹ್ನ 3.30 ರಿಂದ ರಾಧಾಕೃಷ್ಣ ಮಂದಿರ(ಬಾಳಂ ಭಟ್ಟರ ಮನೆ)ದಿಂದ ಗಣೇಶನ ವಿಗ್ರಹವನ್ನು ವಿಶೇಷ ಮೆರವಣಿಗೆಯ ಮುಖಾಂತರ ಓಂಕಾರ ನಗರಕ್ಕೆ ತರಲಾಗುವುದು. ಸೆ.19ರ ಮಂಗಳವಾರ ಬೆಳಗ್ಗೆ 8 ಗಂಟೆಗೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದ್ದು ಬೆಳಗ್ಗೆ 9 ಗಂಟೆಗೆ ತೆನೆ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದರು.ಸೆ.21ರ ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಜರಗಲಿದೆ. ಸಂಜೆ 4 ಗಂಟೆಗೆ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದವರು ತಿಳಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಸಿಎ., ಕೋಶಾಧಿಕಾರಿ ರಾಮ್‌ಮೋಹನ್ ರೈ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ, ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ರವಿರಾಜ್ ಶೆಟ್ಟಿ, ಕೃಷ್ಣ ಪ್ರಸಾದ್ ರೈ ಬೆಳ್ಳಿಪ್ಪಾಡಿ, ಡಾ.ಆಶಾಜ್ಯೋತಿ ರೈ, ಉದಯ ಕುಮಾರ್ ಶೆಟ್ಟಿ, ಸಂಜೀವ ಶೆಟ್ಟಿ, ಸುಧಾಕರ ಪೂಂಜ, ಪ್ರೇಮಾನಂದ ಶೆಟ್ಟಿ, ಸಿಎ. ಸುದೇಶ್ ರೈ, ಭಾರತಿ ಜಿ. ಶೆಟ್ಟಿ, ಅರುಣಾ ಶೆಟ್ಟಿ ಹಾಗೂ ಉಲ್ಲಾಸ್ ಶೆಟ್ಟಿ ಸಹಿತ ವಿವಿಧ ಉಪ ಸಮಿತಿಯ ಸಂಚಾಲಕರು ಉಪಸ್ಥಿತರಿದ್ದರು.