ಬೆಂಗಳೂರು: ಕನ್ನಡ ಸುದ್ದಿ ವಾಹಿನಿ ‘ದಿಗ್ವಿಜಯ’ ಸುದ್ದಿವಾಹಿನಿ ಅಧಿಕೃತವಾಗಿ ರಿಪಬ್ಲಿಕ್ ತೆಕ್ಕೆಗೆ ಸೇರಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಅರ್ನಬ್ ಗೋಸ್ವಾಮಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸುವ ಮೂಲಕ ಬಹಿರಂಗ ಪಡಿಸಲಿದ್ದಾರೆ. ವಿಜಯ್ ಸಂಕೇಶ್ವರ್ ಮಾಲೀಕತ್ವದ ವಿಆರ್‌ಎಲ್ ಸಂಸ್ಥೆ 2017ರಲ್ಲಿ ದಿಗ್ವಿಜಯ ಟಿವಿ ಚಾನೆಲ್ ಅನ್ನು ಆರಂಭಿಸಿತ್ತು. ಆದರೀಗ ಈ ಸಂಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಸತತ ಐದು ವರ್ಷಗಳಿಂದ ನಂಬರ್ 1 ಸ್ಥಾನದಲ್ಲಿರುವ ರಿಪಬ್ಲಿಕ್ ಚಾನಲ್‌ನೊಂದಿಗೆ ವಿಲೀನಗೊಳಿಸಲಾಗಿದೆ.
ಮುಂದಿನ ಕೆಲ ತಿಂಗಳ ಕಾಲ ‘ದಿಗ್ವಿಜಯ’ ಎನ್ನುವ ಹೆಸರಿನಲ್ಲಿಯೇ ಸುದ್ದಿವಾಹಿನಿ ಮುಂದುವರಿಯಲಿದ್ದು,ಆದಾದ ಬಳಿಕ ‘ರಿಪಬ್ಲಿಕ್ ಕನ್ನಡ’ಎನ್ನುವ ಹೆಸರಿನಲ್ಲಿ ಕಾರ್ಯಚರಣೆ ನಡೆಸುವುದು ಎಂದು ತಿಳಿದು ಬಂದಿದೆ.
ಟಿಆರ್‌ಪಿಯಲ್ಲಿ ಮೊದಲ ಸ್ಥಾನವನ್ನು ರಿಪಬ್ಲಿಕ್ ಚಾನೆಲ್ ಕಾಯ್ದುಕೊಂಡಿದೆ. ಈಗಾಗಲೇ ರಿಪಬ್ಲಿಕ್ ಭಾರತ್, ರಿಪಬ್ಲಿಕ್ ವರ್ಲ್, ಚಾನೆಲ್ ಮೂಲಕ ಇಂಗ್ಲಿಷ್, ಹಿಂದಿ ಹಾಗೂ ಬಂಗಾಳಿ ಭಾಷೆಯಲ್ಲಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಕನ್ನಡದಲ್ಲಿಯೂ ಅರ್ನಬ್ ಗೋಸ್ವಾಮಿ ಸುದ್ದಿ ವಾಹಿನಿಯನ್ನ ಆರಂಭಿಸಲಿದ್ದಾರೆ.
ಇನ್ನೂ ದಿಗ್ವಿಜಯ ಸುದ್ದಿವಾಹಿನಿಯ ಕುರಿತು ಈಗಾಗಲೇ ಕಳೆದ ವಾರವೇ ಮಾಲೀಕತ್ವ ಹಸ್ತಾಂತರ ಪ್ರಕ್ರಿಯೆ ಮುಗಿದಿದೆ. ಇದೀಗ ಶುಕ್ರವಾರ ಸಂಜೆ ಅರ್ನಬ್ ಗೋಸ್ವಾಮಿ ಅವರು ದಿಗ್ವಿಜಯ ವಾಹಿನಿಯ ಸ್ಟುಡಿಯೋದಿಂದಲೇ ರಿಪಬ್ಲಿಕ್ ಟಿವಿಯ ರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸುದ್ದಿ ವಾಹಿನಿಯ ಮಾಲೀಕತ್ವವನ್ನು ಸಂಕೇಶ್ವರ್ ಅವರು ಅರ್ನಬ್ ಗೋಸ್ವಾಮಿ ಅವರಿಗೆ ಹಸ್ತಾಂತರಿಸಿದ್ದಾರೆ. ಆದರೆ ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಕೂಡಲೇ ಸಂಸ್ಥೆಯ ಹೆಸರನ್ನು ಬದಲಾವಣೆ ಮಾಡಲು ಹಲವು ದಿನಗಳು ಬೇಕಾಗಬಹುದು ಎಂದು ಹೇಳಲಾಗಿದೆ.