ಮಂಗಳೂರು: ಅನಂತ್‌ನಾಗ್-75 ಅಭಿನಂದನ ಸಮಿತಿ ಹಾಗೂ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಟ ಅನಂತ್‌ನಾಗ್ ಅವರಿಗೆ 75ರ ಸಂಭ್ರಮ ಮತ್ತು ವೃತ್ತಿ ಜೀವನದ 50ರ ಸಂಭ್ರಮದ ಕಾರ್ಯಕ್ರಮ “ಅನಂತ ಅಭಿನಂದನೆ’ ಸೆ. 3ರಂದು ಬೆಳಗ್ಗೆ 9.30ರಿಂದ ನಗರದ ಕೊಡಿಯಾಲಬೈಲ್‌ನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಅಭಿನಂದನ ಸಮಿತಿತ ಸಂಚಾಲಕ, ಚಲನಚಿತ್ರ, ರಂಗಭೂಮಿ ನಟ ಗೋಪಿನಾಥ ಭಟ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನ ಡೊಂಗರಕೇರಿ ಕೆನರಾ ಹೈಸ್ಕೂಲ್ ಆವರಣದಿಂದ ಅನಂತನಾಗ್ ದಂಪತಿಯನ್ನು ವಿವಿಧ ಕಲಾತಂಡಗಳೊಂದಿಗೆ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಗುತ್ತದೆ. 10 ಗಂಟೆಗೆ ಉದ್ಘಾಟನೆ ನೆರವೇರಲಿದ್ದು, ಬಳಿಕ ಯುವ ಸಮುದಾಯ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಸಂವಹನ ಕಾರ್ಯ ಕ್ರಮ ನಡೆಯಲಿದೆ ಎಂದರು.
ಮಧ್ಯಾಹ್ನ 2ರಿಂದ ಮಣಿಕಾಂತ್ ಕದ್ರಿ, ರವೀಂದ್ರ ಪ್ರಭು ತಂಡದಿಂದ ಅನಂತನಾಗ್ ಅವರ ಆಯ್ದ ಜನಪ್ರಿಯ ಹಾಡುಗಳು, ನೃತ್ಯ ವೈವಿಧ್ಯ ನೆರವೇರಲಿದೆ. ಸಂಜೆ 6ರಿಂದ ಸಮ್ಮಾನ ಕಾರ್ಯಕ್ರಮ ನೆರವೇರಲಿದ್ದು, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ನಟ ರಿಷಭ್ ಶೆಟ್ಟಿ, ನಿರ್ಮಾಪಕ ಹರೀಶ್ ಶೇರಿಗಾರ್, ರಂಗಭೂಮಿ ನಟ ದೇವದಾಸ್ ಕಾಪಿಕಾಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.