ನವದೆಹಲಿ : ಕೇಂದ್ರ ಸರ್ಕಾರವನ್ನ ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆ ಜಾತಿ ಗಣತಿ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್’ಗೆ ತಿಳಿಸಲಾಗಿದೆ. 1948ರ ಜನಗಣತಿ ಕಾಯ್ದೆಯು ಜನಗಣತಿ ನಡೆಸಲು ಸರ್ಕಾರಕ್ಕೆ ಮಾತ್ರ ಅಧಿಕಾರ ನೀಡುತ್ತದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿದೆ.
ಕೇಂದ್ರದ ಈ ಕ್ರಮವು ಬಿಹಾರ ಸರ್ಕಾರಕ್ಕೆ ಸವಾಲಾಗಿದ್ದು, ಬಿಹಾರದಲ್ಲಿ ಜಾತಿ ಜನಗಣತಿಯ ಸಮೀಕ್ಷೆಯನ್ನು ಆಗಸ್ಟ್ 6 ರೊಳಗೆ ನಡೆಸಲಾಗಿದೆ ಎಂದು ಹಿಂದಿನ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ಗೆ ತಿಳಿಸಿತ್ತು.
ಭಾರತದ ಸಂವಿಧಾನದ ನಿಬಂಧನೆಗಳು ಮತ್ತು ಅನ್ವಯವಾಗುವ ಕಾನೂನಿಗೆ ಅನುಗುಣವಾಗಿ ಎಸ್ಸಿ / ಎಸ್ಟಿ / ಎಸ್‌ಇಬಿಸಿ ಮತ್ತು ಒಬಿಸಿಗಳ ಉನ್ನತಿಗಾಗಿ ಎಲ್ಲಾ ಸಕಾರಾತ್ಮಕ ಕ್ರಮಗಳನ್ನ ತೆಗೆದುಕೊಳ್ಳಲು ಬದ್ಧವಾಗಿದೆ ಎಂದು ಸರ್ಕಾರ ಹೇಳಿದೆ.
ಬಿಹಾರ ಸರ್ಕಾರ ಆದೇಶಿಸಿದ್ದ ಜಾತಿ ಸಮೀಕ್ಷೆಯನ್ನು ಎತ್ತಿಹಿಡಿದ ಪಾಟ್ನಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ವಿವಿಧ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಜಾತಿಗಳ ಆಧಾರದ ಮೇಲೆ ಸಮೀಕ್ಷೆ ನಡೆಸುವ ನಿತೀಶ್ ಕುಮಾರ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಪಾಟ್ನಾ ಹೈಕೋರ್ಟ್ ಈ ಹಿಂದೆ ವಜಾಗೊಳಿಸಿತ್ತು.
ಬಿಹಾರ ಜಾತಿ ಸಮೀಕ್ಷೆಯು 534 ಬ್ಲಾಕ್ಗಳು ಮತ್ತು 261 ನಗರ ಸ್ಥಳೀಯ ಸಂಸ್ಥೆಗಳನ್ನ ಹೊಂದಿರುವ 38 ಜಿಲ್ಲೆಗಳ ಅಂದಾಜು 2.58 ಕೋಟಿ ಕುಟುಂಬಗಳಲ್ಲಿ ಅಂದಾಜು 12.70 ಕೋಟಿ ಜನಸಂಖ್ಯೆಯನ್ನ ಒಳಗೊಳ್ಳುತ್ತದೆ.