ಬೆಂಗಳೂರು-ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ಪೂರಕ ವಾತಾವರಣ ಇದ್ದು, ತುಮಕೂರು, ದಾವಣಗೆರೆ ಮತ್ತಿತರ ಹಂತ 2ರ ನಗರಗಳಲ್ಲಿಯೂ ಹೂಡಿಕೆ ಮಾಡಲು ಅವಕಾಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಚೆನ್ನೈನಲ್ಲಿನ ಅಮೇರಿಕ ದೂತಾವಾಸದ ಕಾನ್ಸಲ್ ಜನರಲ್ ಕ್ರಿಸ್ಟೊಫರ್ ಡಬ್ಲ್ಯು ಹಾಡ್ಜಸ್ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಕರ್ನಾಟಕ ರಾಜ್ಯ ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ರಾಜ್ಯವಾಗಿದ್ದು, ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಹೊಂದಿದೆ. ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಅತ್ಯುತ್ತಮವಾಗಿದ್ದು, ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನಷ್ಟು ಹೂಡಿಕೆ ಮಾಡುವಂತೆ ಮುಖ್ಯಮಂತ್ರಿಯವರು ತಿಳಿಸಿದರು.
ಬೆಂಗಳೂರಿನಲ್ಲಿ ಅಮೆರಿಕಾ ದೂತಾವಾಸ ಕಚೇರಿ:
ಬೆಂಗಳೂರಿನಲ್ಲಿ ಅಮೆರಿಕಾ ದೂತಾವಾಸ ಕಚೇರಿ ಪ್ರಾರಂಭಿಸುವ ತೀರ್ಮಾನವನ್ನು ಸ್ವಾಗತಿಸಿದ ಮುಖ್ಯಮಂತ್ರಿಯವರು, ಇದಕ್ಕೆ ಎಲ್ಲ ಅಗತ್ಯ ಬೆಂಬಲ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ರಿಸ್ಟೊಫರ್ ಹಾಡ್ಜಸ್ ಅವರು, “ಬೆಂಗಳೂರು ಪ್ರವಾಸ ಹಾಗೂ ಭಾರತ – ಅಮೆರಿಕಾ ಭಾಗೀದಾರಿಕೆಯ ಬಗ್ಗೆ ಇಲ್ಲಿರುವ ಉತ್ಸಾಹ, ಆಶಾವಾದ ಹೊಸ ಚೈತನ್ಯ ಮೂಡಿಸಿದೆ. ಇಲ್ಲಿರುವ ಸುಮಾರು 650 ಅಮೇರಿಕನ್ ಕಂಪನಿಗಳು ಮತ್ತು 30 ವರ್ಷಗಳಿಂದ ಅಮೇರಿಕದ ಕಚೇರಿ ಇಲ್ಲಿ ಕೆಲಸ ಮಾಡುತ್ತಿರುವುದು ನಮ್ಮ ಬದ್ಧತೆಗೆ ಸಾಕ್ಷಿ. ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ಮುಂದೆ ಹೇಗೆ ಕೊಂಡೊಯ್ಯಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದು ಖುಷಿ ತಂದಿದೆ” ಎಂದರು.
ಪೊಲಿಟಿಕಲ್/ಎಕನಾಮಿಕ್ ವಿಭಾಗದ ಮುಖ್ಯಸ್ಥೆ ವಿರ್ಸಾ ಪರ್ಕಿನ್ಸ್, ಪೊಲಿಟಿಕಲ್/ಎಕನಾಮಿಕ್ ಆಫೀಸರ್ ಜೇಸನ್ ಇವಾನ್ಸ್ , ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಹಾಗೂ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಉಪಸ್ಥಿತರಿದ್ದರು.