ಮಂಗಳೂರು : ಕುಮಾರಿ ಸೌಜನ್ಯಾ ಪರ ನ್ಯಾಯಕ್ಕಾಗಿ ಹೋರಾಡುತ್ತಿರುವ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ರಕ್ಷಣೆಗಾಗಿ ರಾಜ್ಯ ಸರಕಾರವು ಗನ್ ಮ್ಯಾನ್ ಒದಗಿಸಲು ಮುಂದಾಗಿದೆ.
ಮಹೇಶ್ ಶೆಟ್ಟಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಸರಕಾರದ ಗಮನಕ್ಕೆ ತಂದ ಬಳಿಕ ಈ ಬೆಳವಣಿಗೆ ನಡೆದಿದೆ.
ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಆಗಸ್ಟ್ 17ರಂದು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದ ವಸಂತ ಬಂಗೇರ ಮಹೇಶ್ ಶೆಟ್ಟಿ ಅವರಿಗೆ ಇಬ್ಬರು ಗನ್ ಮ್ಯಾನ್ ಒದಗಿಸುವಂತೆ ಮನವಿ ಮಾಡಿದ್ದರು. ಇದೀಗ ಪರಮೇಶ್ವರ್ ದಕ್ಷಿಣ ಕನ್ನಡ ಎಸ್.ಪಿ. ರಿಷ್ಯಂತ್ ಅವರಿಗೆ ಸೂಚನೆ ನೀಡಿ ಗನ್ ಮ್ಯಾನ್ ಒದಗಿಸುವಂತೆ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ಕಳೆದ ತಿಂಗಳು ಎಸ್.ಪಿ.ಗೆ ಮನವಿ ನೀಡಿದ್ದ ಮಹೇಶ್ ಶೆಟ್ಟಿ ಗನ್ ಮ್ಯಾನ್ ಒದಗಿಸುವಂತೆ ಕೇಳಿಕೊಂಡಿದ್ದರು. ಆದರೆ ಯಾವುದೇ ಜೀವ ಬೆದರಿಕೆ ಕರೆ ಇಲ್ಲವೆಂದು ಗುಪ್ತಚರ ಇಲಾಖೆ ವರದಿ ನೀಡಿದ ಹಿನ್ನಲೆಯಲ್ಲಿ ಅಂದಿನ ಮನವಿ ಅಂಗೀಕಾರವಾಗಿರಲಿಲ್ಲ.