ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಜಕ್ಕಳ್ಳಿ ಗ್ರಾಮದ ಸರ್ವೇ ನಂಬರ್ 105ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ 1 ಎಕರೆ 24 ಗುಂಟೆ ಜಮೀನು ಹೊಂದಿದ್ದರು. ಇಲ್ಲಿ ತೋಟಗಾರಿಕೆ ಉದ್ದೇಶದಿಂದ ತಾತ್ಕಾಲಿಕವಾಗಿ ಮನೆ ನಿರ್ಮಾಣ ಮಾಡೋದಕ್ಕೆ ಬಂಡೀಪುರ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯಿಂದ ಅನುಮತಿ ನೀಡಲಾಗಿತ್ತು. ಆದ್ರೇ ಅವರು ಸೂಕ್ಷ್ಮ ವಲಯದಲ್ಲೇ ಬೃಹತ್ ಕಟ್ಟಡ ನಿರ್ಮಿಸಲು ಸಿದ್ಧತೆ ಕೈಗೊಂಡಿದ್ದರು.
ಈ ಹಿನ್ನಲೆಯಲ್ಲಿ ನಟ ಗಣೇಶ್ ಪರಿಸರ ಸೂಕ್ಷ್ಮ ವಲಯದಲ್ಲಿ ಶಾಶ್ವತ ಕಟ್ಟ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶವಿಲ್ಲ. ಕೂಡಲೇ ಕ್ರಮ ಕೈಗೊಳ್ಳುವಂತೆ ಅನೇಕ ಪರಿಸರವಾದಿಗಳು ಒತ್ತಾಯಿಸಿದ್ದರು.
ಈ ಬಳಿಕ ಬಂಡೀಪುರ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗುಂಡ್ಲುಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಮಾಧಿಕಾರಿ ರವೀಂದ್ರ ಅವರು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್ ಕುಮಾರ್ ಅವರಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಆಧರಿಸಿ, ನಟ ಗಣೇಶ್ ಗೆ ಅರಣ್ಯ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಕೂಡಲೇ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿತ್ತು.
ಬಂಡೀಪುರ ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ನೀಡಿರುವ ನಿಬಂಧನೆಗಳನ್ನು ಹಾಗೂ ನೀವು ಮುಚ್ಚಳಿಕೆ ಪತ್ರದಲ್ಲಿ ಬರೆದುಕೊಟ್ಟಿರುವ ಷರತ್ತುಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಿತ್ತು.
ಈ ಕಟ್ಟಡಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು (ಕಟ್ಟಡದ ಅನುಮೋದಿತ ನೀಲ ನಕ್ಷೆ, ಕಂದಾಯ ಇಲಾಖೆ ಹಾಗೂ ಇತರೆ ಸಂಬಂಧಿತ ಇಲಾಖೆಗಳಿಂದ ತಾತ್ಕಾಲಿಕ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ) ಪತ್ರ ತಲುಪಿದ ಏಳು ದಿನಗಳ ಒಳಗಾಗಿ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರ ಮುಂದೆ ಹಾಜರು ಪಡಿಸಲು ಮತ್ತು ಮುಂದಿನ ಆದೇಶವರೆಗೆ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿತ್ತು.
ಈ ನೋಟಿಸ್ ಗೆ 7 ದಿನಗಳ ಒಳಗಾಗಿ ಉತ್ತರಿಸುವಂತೆ ಇದೇ ಆಗಸ್ಟ್.14ರಂದು ಗೋಲ್ಡನ್ ಸ್ಟಾರ್ ಗಣೇಶ್ ಗೆ ಅರಣ್ಯ ಇಲಾಖೆ ಹೊರಡಿಸಿರುವಂತ ನೋಟಿಸ್ ನಲ್ಲಿ ತಿಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ನಟ ಗಣೇಶ್ ಅವರು ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.