ಬೆಂಗಳೂರು: ಇದುವರೆಗೆ ಕಂಬಳ ಆಯೋಜನೆ ಆಗೋದನ್ನು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತಿತ್ತು. ಆದರೆ ಇದೀಗ ಉದ್ಯಾನನಗರಿ ಬೆಂಗಳೂರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.ತುಳುಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಲು ಸಿದ್ದತೆ ನಡೆಯುತ್ತಿದೆ.
ತುಳುಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಮೊಟ್ಟ ಮೊದಲು ಬಾರಿಗೆ ರಾಜಧಾನಿಯಲ್ಲಿ ಕಂಬಳವನ್ನ ಆಯೋಜನೆ ಮಾಡಲು ತುಳುಕೂಟ ನಿರ್ಧರಿಸಿದೆ. ಸದ್ಯ ಈ ಕಂಬಳವನ್ನ ಪ್ಯಾಲೇಸ್ ಗ್ರೌಂಡ್’ನಲ್ಲಿ ಆಯೋಜನೆ ಮಾಡಲು ಜಾಗ ಗುರುತಿಸಿದ್ದು, ಈಗಾಗಲೇ ಮೈಸೂರು ಒಡೆಯರ್ ಜೊತೆಗೂ ಚರ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ನವೆಂಬರ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಕಂಬಳ ನಡೆಸಲು ದಿನಾಂಕ ನಿಗದಿ ಮಾಡಲಿದ್ದು, ಕಂಬಳಕ್ಕೆ 100 ರಿಂದ 150 ಜೋಡಿಯ ಕೋಣಗಳು ಬರಲಿವೆ ಎಂದು ಮೂಲಗಳು ಹೇಳಿವೆ.
ಈ ಕಂಬಳ ಒಟ್ಟು ಮೂರು ದಿನಗಳ ಕಾಲ ನಡೆಯಲಿದ್ದು, ಅಂದಾಜು 50 ಸಾವಿರದಷ್ಟು ಜನರು ಬರುವ ನಿರೀಕ್ಷೆ ಇದೆ. ಬಾಲಿವುಡ್ ನಟಿ ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಚೀಫ್ ಗೆಸ್ಟ್ ಆಗಿ ಬರುವ ಸಾಧ್ಯತೆ ಕೂಡ ಇದ್ದು, ಸಿಎಂ ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಕಂಬಳಕ್ಕೆ ಬರುವ ಕೋಣಗಳನ್ನ ರೈಲಿನಲ್ಲಿ ಕರೆತರಲು, ಕೇಂದ್ರ ರೈಲು ಸಚಿವರ ಜೊತೆಗೆ ಒಂದು ಸುತ್ತಿನ ಮಾತುಕತೆಯು ನಡೆದಿದೆ ಎನ್ನಲಾಗಿದೆ. ಕೆಸರುಗದ್ದೆಯನ್ನ ಕಂಬಳ ಪ್ರಾರಂಭಕ್ಕೆ ಒಂದು ವಾರ ಮುಂಚಿತವಾಗಿ ಸಿದ್ಧಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಬೆಂಗಳೂರಿಗರಿಗೆ ಕಂಬಳವನ್ನ ಪರಿಚಯಿಸುವ ಕೆಲಸವನ್ನ ತುಳುಕೂಟ ಮಾಡುತ್ತಿದೆ.